ಕೋಲಾರ, ಜು 09 (DaijiworldNews/PY): ಸರ್ವೇ ನಡೆಸಲು ಹೋದ ತಹಶೀಲ್ದಾರನಿಗೆ ನಿವೃತ್ತ ಶಿಕ್ಷಕರೊಬ್ಬ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಳವಂಚಿ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ತಹಶಿಲ್ದಾರರನ್ನು ಬಂಗಾರಪೇಟೆಯ ನಿವಾಸಿ ಚಂದ್ರಮೌಳೇಶ್ವರ ಹಾಗೂ ಆರೋಪಿಯನ್ನು ನಿವೃತ್ತ ಶಿಕ್ಷಕ ವೆಂಕಟಾಚಲಪತಿ ಎನ್ನಲಾಗಿದೆ. ಗುರುವಾರದಂದು ಸರ್ವೇ ನಡೆಸಲು
ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ್ ಕಳವಂಚಿ ಗ್ರಾಮಕ್ಕೆ ಹೋಗಿದ್ದ ಸಂದರ್ಭ ನಿವೃತ್ತ ಶಿಕ್ಷಕ ವೆಂಕಟಪತಿ ಎನ್ನುವವರು ಚಾಕು ಇರಿದು ಪರಾರಿಯಾಗಿದ್ದಾರೆ.
ರಾಮಮೂರ್ತಿ ಹಾಗೂ ವೆಂಕಟಪತಿ ಎನ್ನುವವರ ಮಧ್ಯೆ ಜಮೀನು ವ್ಯಾಜ್ಯವಿದ್ದು, ಈ ಬಗ್ಗೆ ರಾಮಮೂರ್ತಿ ಬಂಗಾರಪೇಟೆ ತಹಶೀಲ್ದಾರ್ಗೆ ಇಬ್ಬರ ಜಮೀನನ್ನು ಹದ್ದುಬಸ್ತಿನಲ್ಲಿಡುವಂತೆ ದೂರು ನೀಡಿದ್ದರು. ದೂರಿನ ಅನ್ವಯ ಕಾಮಸಮುದ್ರ ಪೊಲೀಸ್ ಠಾಣೆಯ ಪೇದೆಯೊಂದಿಗೆ ತಹಶೀಲ್ದಾರ್ ಚಂದ್ರಮೌಳೇಶ್ವರ್ ಸರ್ವೇ ನಡೆಸಲು ಹೋಗಿದ್ದು, ವೆಂಕಟಪತಿ ಅವರ ಜಮೀನಿನಲ್ಲಿ ಕಲ್ಲು ಊಳಿಸಿದ್ದಾರೆ. ಈ ಕಾರಣಕ್ಕೆ ಸಿಟ್ಟುಗೊಂಡ ವೆಂಕಟಪತಿ ತಹಶೀಲ್ದಾರ್ಗೆ ಏಕಾಏಕಿ ಚಾಕು ಇರಿದು ಪರಾರಿಯಾಗಿದ್ದಾರೆ.
ತ್ರೀವ ಗಂಭೀರ ಸ್ಥಿತಿಯಲ್ಲಿದ್ದ ತಹಶಿಲ್ದಾರ ಅವರನ್ನು ಜಾಲಪ್ಪ ಆಸ್ಪತ್ರೆಗೆ ದಾಖಲಿಸಿತ್ತಾದರೂ ಅವರು ಅಷ್ಟರಲ್ಲೇ ಮೃತಪಟ್ಟಿದ್ದಾರೆ.