ಲಕ್ನೋ, ಜು 10 (DaijiworldNews/PY): ಎಂಟು ಮಂದಿ ಪೊಲೀಸರನ್ನು ಹತ್ಯೆಗೈದು, ಪರಾರಿಯಾಗಿದ್ದ ಕುಖ್ಯಾತ ರೌಡಿಶೀಟರ್ ವಿಕಾಸ್ ದುಬೆ ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದಾನೆ.
ಗುರುವಾರ ವಿಕಾಸ್ ದುಬೆಯನ್ನು ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಪೊಲೀಸರು ಬಂಧಿಸಿದ್ದರು. ಉತ್ತರ ಪ್ರದೇಶದ ಪೊಲೀಸರಿಗೆ ಆತನನ್ನು ಮಧ್ಯಪ್ರದೇಶದ ಪೊಲೀಸರು ಹಸ್ತಾಂತರಿಸಲು ಕಾನ್ಪುರಕ್ಕೆ ಕರೆತರುವ ಸಂದರ್ಭ ಪೊಲೀಸರ ಬೆಂಗಾವಲು ವಾಹನ ಮಗುಚಿ ಬಿದ್ದಿದೆ. ಈ ಸಂದರ್ಭ ವಿಕಾಸ್ ದುಬೆ ಪರಾರಿಯಾಗಲು ಪ್ರಯತ್ನಿಸಿದ ವೇಳೆ ಎನ್ಕೌಂಟರ್ನಿಂದ ಸಾವನ್ನಪ್ಪಿದ್ದಾನೆ.
ಈ ಅಪಘಾತ ಕಾನ್ಪುರದ ಬರ್ರಾ ಸಮೀಪ ನಡೆದಿದ್ದು, ಅಪಘಾತದ ಬೆನ್ನಲ್ಲೇ ವಿಕಾಸ್ ದುಬೆ ಪರಾರಿಯಾಗಲು ಯತ್ನ ಮಾಡಿದ ಸಂದರ್ಭ ಪೊಲೀಸರು ಗುಂಡು ಹಾರಿಸಿದ್ದಾರೆ. ವಿಕಾಸ್ ದುಬೆ ಎನ್ಕೌಂಟರ್ನಲ್ಲಿ ಸಾವನ್ನಪ್ಪಿರುವುದಾಗಿ ಕಾನ್ಪುರ ಐಜಿ ಮೋಹಿತ್ ಅಗರ್ವಾಲ್ ಹೇಳಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.