ತಿರುವನಂತಪುರಂ, ಜು 10 (Daijiworld News/MSP): ಕೇರಳದ ತಿರುವನಂತಪುರಂನ ಗ್ರಾಮವೊಂದು ಈಗ ಕಮಾಂಡೋಗಳ ಹದ್ದಿನ ಕಣ್ಣು ಕಾವಲುಗೊಳಪಟ್ಟಿದೆ. ತಿರುವನಂತಪುರಂದ ಕರಾವಳಿ ಗ್ರಾಮವಾದ ಪೂಂಥುರಾದಲ್ಲಿ ಕಮಾಂಡೋಗಳ್ಯಾಕೆ ಕಾವಲಿದ್ದಾರೆ ಎನ್ನುವ ಪ್ರಶ್ನೆ ಸಹಜ.
ಪೂಂಥುರಾ ಗ್ರಾಮದಲ್ಲಿ 'ಸೂಪರ್-ಸ್ಪ್ರೆಡರ್ಗಳು' ಪತ್ತೆಯಾಗಿದ್ದು, ಸ್ಥಳೀಯ ಮಟ್ಟದಲ್ಲಿ ಸೋಂಕು ವ್ಯಾಪಕವಾಗಿ ಹಬ್ಬಿದ್ದು ಬೃಹತ್ ಕೋವಿಡ್ -19 ಕ್ಲಸ್ಟರ್ ಆಗಿ ಹೊರಹೊಮ್ಮಿದೆ.ಇದು ಕೇರಳದ ಮೊದಲ ಕೋವಿಡ್ 19 ಕ್ಲಸ್ಟರ್ ಆಗಿ ಪರಿವರ್ತನೆಯಾಗುತ್ತಿದೆ ಎಂಬ ಸಂದೇಹವನ್ನು ಆರೋಗ್ಯ ತಜ್ಞರು ವ್ಯಕ್ತಪಡಿಸಿದ್ದಾರೆ.
ವೈರಸ್ ಹರಡುವಿಕೆಯನ್ನು ತಡೆಗಟ್ಟುವಲ್ಲಿ, ರಾಜ್ಯ ಸರ್ಕಾರವು ಇದರ ಅಕ್ಕಪಕ್ಕದ ಉಪನಗರ ಗಡಿಗಳನ್ನು ಮುಚ್ಚಲು ನಿರ್ಧರಿಸಿದೆ. ಅಲ್ಲದೆ ಇಡೀ ಗ್ರಾಮವನ್ನು ಕಮಾಂಡೋಗಳಿಂದ ಸುತ್ತುವರಿಯಲಾಗಿದೆ. ಈ ಪ್ರದೇಶದಲ್ಲಿ ಪರೀಕ್ಷಿಸಿದ 600 ಮಾದರಿಗಳಲ್ಲಿ ಐದು ದಿನಗಳ ಅವಧಿಯಲ್ಲಿ ಕಳೆದ ಪರೀಕ್ಷೆಯಲ್ಲಿ 119 ಸ್ಯಾಂಪಲ್ಗಳ ವರದಿ ಕೋವಿಡ್ -19 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಹೀಗಾಗಿ, ಸುಮಾರು 25ರಷ್ಟು ಕಮಾಂಡೋಗಳನ್ನು ಈ ಗ್ರಾಮದಲ್ಲಿ ನಿಯೋಜಿಸಲಾಗಿದೆ. ಜತೆಗೆ, ದಿನದ 24 ಗಂಟೆಯೂ ಆ್ಯಂಬುಲೆನ್ಸ್ಗಳು, ಪೊಲೀಸ್ ವಾಹನಗಳು ಇಲ್ಲಿನ ವಾರ್ಡ್ಗಳಲ್ಲಿ ಸಂಚರಿಸುತ್ತಿರುತ್ತವೆ.
ಒಟ್ಟಿನಲ್ಲಿ ಈ ಗ್ರಾಮದಲ್ಲಿ ಸೋಂಕು ಇನ್ನಷ್ಟು ಮಂದಿಗೆ ವ್ಯಾಪಿಸದಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ . ಜಾರಿಯಲ್ಲಿರುವ ಕಠಿಣ ನಿರ್ಬಂಧಗಳ ಮಧ್ಯೆ ಈ ಪ್ರದೇಶದ ಜನರಿಗೆ ಜಿಲ್ಲಾಡಳಿತ ಎಲ್ಲಾ ಅಗತ್ಯ ಸಹಾಯವನ್ನು ನೀಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.