ನವದೆಹಲಿ, ಜು 10 (Daijiworld News/MSP): ವಿಶ್ವಾದ್ಯಾಂತ ಕೋವಿಡ್ 19 ವೈರಸ್ ಅಟ್ಟಹಾಸದ ನಡುವೆಯೂ ಐಸಿಸ್ ಭಯೋತ್ಪಾದಕ ಸಂಘಟನೆ ಭಯೋತ್ಪಾದಕರನ್ನು ಆನ್ಲೈನ್ನಲ್ಲಿ ನೇಮಕ ಮಾಡುವ ಮೂಲಕ ತನ್ನ ಸಂಘಟನೆಯನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ ಎಂಬ ಅಘಾತಕಾರಿ ಮಾಹಿತಿಯನ್ನು ಭಾರತೀಯ ಭದ್ರತಾ ಸಂಸ್ಥೆ ಹೊರಹಾಕಿದೆ.
ಇದಕ್ಕಿಂತಲೂ ಹೆಚ್ಚಾಗಿ , ಆನ್ಲೈನ್ ಮೂಲಕ ನೇಮಿಸಿಕೊಳ್ಳುತ್ತಿರುವ ಉಗ್ರರಿಗೆ ಅಂತರ್ಜಾಲ ಬಳಸುವಾಗ ಭದ್ರತಾ ಸಂಸ್ಥೆಗಳ ರೇಡಾರ್ ನಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂಬ ಬಗ್ಗೆ ಐಸಿಸ್ ಸಂಘಟನೆಯಲ್ಲಿರುವ ಉಗ್ರರಿಗೆ ತರಬೇತಿ ನೀಡುತ್ತಿದೆ ಎಂದು ಮಾಹಿತಿ ಹೊರಹಾಕಿದೆ .
ಮೇ ತಿಂಗಳಲ್ಲಿ ಪ್ರಕಟವಾದ "ದಿ ಸಪೋರ್ಟರ್ಸ್ ಸೆಕ್ಯುರಿಟಿ' ಎಂಬ ಸೈಬರ್ ಸೆಕ್ಯುರಿಟಿ ನಿಯತಕಾಲಿಕವೂ "ಲಿಂಕ್ ಟು ಐಸಿಸ್ " ಹೆಸರಿನಲ್ಲಿ ಪ್ರಕಟವಾದ ಲೇಖನದಲ್ಲಿ ಈ ಬಗ್ಗೆ ಸವಿಸ್ತಾರವಾಗಿ ವಿವರಿಸಿದ್ದು , ಸಾಮಾಜಿಕ ಮಾಧ್ಯಮಗಳನ್ನು ಬಳಸುವಾಗ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು, ಇದರಿಂದ ಹೇಗೆ ಭದ್ರತಾ ಸಂಸ್ಥೆಗಳ ಕಣ್ತಪ್ಪಿಸಬಹುದು. ಸ್ಮಾರ್ಟ್ಫೋನ್ಗಳು ಮತ್ತು ಕಂಪ್ಯೂಟರ್ಗಳನ್ನು ಬಳಸುವಾಗ ಹೇಗೆ ಜಾಗರೂಕರಾಗಿರಬೇಕು ಎಂಬ ಎಚ್ಚರಿಕೆ ಐಸಿಸ್ ನೀಡುತ್ತಿರುವ ಬಗ್ಗೆ 24 ಪುಟಗಳ ಈ ನಿಯತಕಾಲಿಕ ವಿವರಿಸುತ್ತದೆ.
ಸೈಬರ್ ಸೆಕ್ಯುರಿಟಿ ವಾಚ್ಡಾಗ್ ಅಧಿಕಾರಿಗಳ ಪ್ರಕಾರ, ಟೆಲಿಗ್ರಾಮ್, ಟ್ವಿಟರ್ ಮತ್ತು ವಾಟ್ಸಾಪ್ ನ ಎಲ್ಲಾ ನಿರ್ವಾಹಕರು ಪಾಕಿಸ್ತಾನದವರಾಗಿದ್ದು, ಅವರು ಜಮ್ಮು ಮತ್ತು ಕಾಶ್ಮೀರದ ತಮ್ಮ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಜನರನ್ನು ಭದ್ರತಾ ಪಡೆಗಳ ಮೇಲೆ ದಾಳಿ ಮಾಡಲು ನಿರ್ದೇಶಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದಲ್ಲದೆ , ಐಸಿಸ್ ಭಯೋತ್ಪಾದಕ ಸಂಘಟನೆ, ವಿಶೇಷ ವಿಡಿಯೋ ಗೇಮ್ ಮೂಲಕ ಜಿಹಾದ್ ಹರಡಲು ಸಂಚು ರೂಪಿಸುತ್ತಿದೆ ಎನ್ನುವುದು ಆತಂಕಕ್ಕೆ ಕಾರಣವಾಗಿದೆ. ಇದಲ್ಲದೆ ಐಸಿಸ್ ತನ್ನ ಆನ್ಲೈನ್ ನಿಯತಕಾಲಿಕ "ದಿ ವಾಯ್ಸ್ ಆಫ್ ಹಿಂದ್" ನಲ್ಲಿ ಏಪ್ರಿಲ್ನಲ್ಲಿ ಬರೆದ ಲೇಖನವೊಂದರಲ್ಲಿ, ಸಾಂಕ್ರಾಮಿಕ ರೋಗದ ಮಧ್ಯೆ ದಾಳಿ ನಡೆಸಲು ತನ್ನ ಬೆಂಬಲಿಗರನ್ನು ಪ್ರಚೋದಿಸಿತ್ತುಎನ್ನುವ ವಿಚಾರವೂ ಬಹಿರಂಗವಾಗಿದೆ