ನವದೆಹಲಿ, ಜು 10 (Daijiworld News/MSP): ಉತ್ತರ ಪ್ರದೇಶದಲ್ಲಿ 8 ಪೊಲೀಸರ ಹತ್ಯೆಗೆ ಕಾರಣವಾಗಿದ್ದ ಗ್ಯಾಂಗ್ ಸ್ಟಾರ್ ವಿಕಾಸ್ ದುಬೆಯನ್ನು ಉತ್ತರ ಪ್ರದೇಶದ ಕಾನ್ಪೂರಕ್ಕೆ ಕರೆದೊಯ್ಯುತ್ತಿದ್ದ ವೇಳೆ ಪರಾರಿಗೆ ಯತ್ನ ನಡೆಸಿದ್ದು, ಈ ವೇಳೆ ಪೊಲೀಸರ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ.
ಮಧ್ಯಪ್ರದೇಶದಲ್ಲಿ ಉಜ್ಜಯಿನಿಂದ ಬಂಧನಕ್ಕೊಳಗಾದ ನಂತರ ದುಬೆ ಎನ್ ಕೌಂಟರ್ ನ ಒಂದು ದಿನದ ಹಿಂದೆಯೇ ಆತನನ್ನು 'ನಕಲಿ' ಎನ್ಕೌಂಟರ್ನಲ್ಲಿ ಕೊಲ್ಲುವ ಸಾಧ್ಯತೆಯಿದೆ ಎಂದು ವಕೀಲ ಘನಶ್ಯಾಮ್ ಉಪಾದ್ಯಾಯ ಎಂಬವರು ಸುಪ್ರೀಂಕೋರ್ಟ್ ಗೆ ಅರ್ಜಿ ಮನವಿ ಸಲ್ಲಿಸಿದ್ದರು.
ವಿಕಾಸ್ ದುಬೆಯ ಐವರು ಸಹಚರರನ್ನು ನಕಲಿ ಎನ್ ಕೌಂಟರ್ ಮಾಡಲಾಗಿದೆ. ಆತನನ್ನು ಕೂಡಾ ನಕಲಿ ಎನ್ ಕೌಂಟರ್ ಮಾಡಿ ಹತ್ಯೆ ಮಾಡಬಹುದು ಎಂದು ವಕೀಲ ಘನಶ್ಯಾಮ್ ಉಪಾದ್ಯಾಯ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ. ಗುರುವಾರ ಸಂಜೆ ಸಲ್ಲಿಸಿದ ಅರ್ಜಿಯಲ್ಲಿ, "ಉತ್ತರ ಪ್ರದೇಶ ಪೊಲೀಸರು ಆರೋಪಿಯನ್ನು ಕಸ್ಟಡಿ ಪಡೆದ ನಂತರ ಇತರ ಸಹ-ಆರೋಪಿಗಳಂತೆ ಆರೋಪಿತ ವಿಕಾಸ್ ದುಬೆ ಅವರನ್ನು ಸಹ ಹತ್ಯೆ ನಡೆಸುವ ಎಲ್ಲಾ ಸಾಧ್ಯತೆಗಳಿವೆ" ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
ಜುಲೈ 2 ರ ಘಟನೆಯ ನಂತರ ಯುಪಿ ಪೊಲೀಸರು ದುಬೆಯ ನಾಲ್ಕು ಸಹಚರರನ್ನು ಹತ್ಯೆ ನಡೆಸಿ "ಎನ್ಕೌಂಟರ್ನ ಕಥೆ " ರಚಿಸಿದಂತೆ ದುಬೆ ಯನ್ನು ಎನ್ ಕೌಂಟರ್ ನಿರೀಕ್ಷೆಯಿದೆ ಎಂದು ಉಪಾಧ್ಯಾಯ ಹೇಳಿದ್ದರು.
ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಬಂಧಿತನಾಗಿದ್ದ ವಿಕಾಸ್ ದುಬೆ ಬಳಿಕ ಮಧ್ಯಪ್ರದೇಶ ಪೊಲೀಸರು ಉತ್ತರ ಪ್ರದೇಶ ಪೊಲೀಸರಿಗೆ ಹಸ್ತಾಂತರಿಸಿದ್ದು, ಕಾನ್ಪುರಕ್ಕೆ ಕರೆದೊಯ್ಯುವ ವೇಳೆ ಪೊಲೀಸರ ಬೆಂಗಾವಲು ವಾಹನ ಮಗುಚಿ ಅಪಘಾತ ಉಂಟಾಗಿತ್ತು. ಈ ವೇಳೆ, ಪೊಲೀಸರಿಂದ ರಿವಲ್ವಾರ್ ಕಸಿದು ವಿಕಾಸ್ ದುಬೆ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದ್ದು, ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ಆತ ಬಲಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.