ನವದೆಹಲಿ,ಜು 10 (Daijiworld News/MSP): ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ನಲ್ಲಿ ಪಾಕಿಸ್ತಾನ ಸೇನೆಯು ಕದನ ವಿರಾಮ ಉಲ್ಲಂಘಿಸಿದ್ದು, ಈ ವೇಳೆ ಕರ್ತವ್ಯ ನಿರತರಾಗಿದ್ದ ಭಾರತದ ಯೋಧ ಹುತಾತ್ಮರಾಗಿದ್ದಾರೆ.
ನೌಶೇರಾ ಸೆಕ್ಟರ್ನಲ್ಲಿನ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಪಾಕಿಸ್ತಾನ ಸೇನೆಯು ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಮುಂದುವರಿದಿದೆ. ಈ ನಡುವೆ ಹೆಚ್ಚುತ್ತಿರುವ ಉಗ್ರರ ಉಪಟಳವನ್ನು ಮಟ್ಟ ಹಾಕುವ ಜವಬ್ದಾರಿಯೂ ಸೇನೆಗಿದೆ. ಈ ವೇಳೆ ಮಾರ್ಟರ್ ಶೆಲ್ಲಿಂಗ್ ಮತ್ತು ಸ್ವಯಂಚಾಲಿತ ಶಾಸ್ತ್ರಾಸ್ತ್ರಗಳ ದಾಳಿಯಲ್ಲಿ ಓರ್ವ ಸೇನಾಧಿಕಾರಿ ಸಾವನ್ನಪ್ಪಿದ್ದಾರೆ. ಅಲ್ಲದೆ ಓರ್ವ ಸ್ಥಳೀಯ ಮಹಿಳೆ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹುತಾತ್ಮ ಯೋಧನನ್ನು ಹವಾಲ್ದಾರ್ ಸಂಬುರ್ ಗುರುಂಗ್ ಎಂದು ಗುರುತಿಸಲಾಗಿದೆ. ಅಲ್ಲದೆ ಇದೇ ದಾಳಿಯಲ್ಲಿ ಹಕಮ್ ಬಿ ಮತ್ತು ರೇಷಮ್ ಬಿ ಎಂಬ ಸ್ಥಳೀಯರು ಕೂಡ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅತ್ತ ಪಾಕ್ ಸೇನೆ ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಸೇನೆ ಕೂಡ ಸೂಕ್ತ ರೀತಿಯಲ್ಲಿ ತಿರುಗೇಟು ನೀಡುತ್ತಿದ್ದು, ಶೆಲ್ಲಿಂಗ್ ಮತ್ತು ಗುಂಡಿನ ದಾಳಿ ನಡೆಸಿದೆ ಎಂದು ಪೂಂಚ್ ನ ಸೇನಾ ಉಪಾಯುಕ್ತ ರಾಹುಲ್ ಯಾದವ್ ಅವರು ಹೇಳಿದ್ದಾರೆ.
"ಹವಾಲ್ದಾರ್ ಸಂಬುರ್ ಗುರುಂಗ್ ಧೈರ್ಯಶಾಲಿ, ಪ್ರೇರಿಣಾತ್ಮಕ ವ್ಯಕ್ತಿತ್ವ ಮತ್ತು ಪ್ರಾಮಾಣಿಕ ಸೈನಿಕರಾಗಿದ್ದರು. ಅವರ ಸರ್ವೋಚ್ಚ ತ್ಯಾಗ ಮತ್ತು ಕರ್ತವ್ಯದ ಭಕ್ತಿಗಾಗಿ ರಾಷ್ಟ್ರವು ಯಾವಾಗಲೂ ಅವರಿಗೆ ಚಿರಋಣಿಯಾಗಿರುತ್ತದೆ". ಎಂದು ಭಾರತೀತ ಸೇನೆ ತಿಳಿಸಿದೆ.