ನವದೆಹಲಿ, ಜು 10 (DaijiworldNews/PY): ವನ್ಯ ಜೀವಿಗಳ ಮೇಲೆ ನಡೆಸುವ ದೌರ್ಜನ್ಯವನ್ನು ತಡೆಗಟ್ಟುವ ಸಲುವಾಗಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರಕ್ಕೆ ಹಾಗೂ 13 ರಾಜ್ಯಗಳಿಗೆ ಇದಕ್ಕೆ ಸಂಬಂಧಿಸಿದ ಪ್ರತಿಕ್ರಿಯೆ ಸಲ್ಲಿಕೆ ಮಾಡುವಂತೆ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
ಕೇರಳದಲ್ಲಿ ದುಷ್ಕರ್ಮಿಗಳು ಸ್ಪೋಟಕ ತುಂಬಿದ್ದ ಪೈನಾಪಲ್ ತಿಂದು ಗರ್ಭಿಣಿ ಆನೆಯೊಂದು ಮೃತಪಟ್ಟ ಘಟನೆಯ ಹಿನ್ನೆಲೆ ವಕೀಲ ಶುಭಂ ಅವಸ್ಥಿ ಅವರು ಅರ್ಜಿಯನ್ನು ಸಲ್ಲಿಸಿದ್ದು, ಈ ಅರ್ಜಿಯ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ನ್ಯಾಯಮೂರ್ತಿಗಳಾದ ಆರ್.ಸುಭಾಷ್ ರೆಡ್ಡಿ, ಎಸ್.ಎ.ಬೋಪಣ್ಣ ಅವರಿರುವ ನ್ಯಾಯಪೀಠ ವಿಚಾರಣೆ ಮಾಡುತ್ತಿದೆ.
ಈ ವಿಚಾರವಾಗಿ ಅರ್ಜಿದಾರರು ಮನವಿ ಮಾಡಿದ್ದು, ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಅಲ್ಲದೇ, ವನ್ಯಜೀವಿಗಳಿಗೆ ಸಂಬಂದಪಟ್ಟಂತಹ ಮಾರ್ಗಸೂಚಿಗಳನ್ನು ರೂಪಿಸಬೇಕು. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತಿಳಿಸಬೇಕು. ಇದರೊಂದಿಗೆ, ವನ್ಯ ಜೀವಿಗಳನ್ನು ಓಡಿಸಲು ಸ್ಪೋಟಕಗಳನ್ನು ಬಳಕೆ ಮಾಡುವುದನ್ನು ಕಾನೂನು ಬಾಹಿರ ಎಂದು ಘೋಷಣೆ ಮಾಡುವಂತೆ ಕೋರಿದರು.