ಶ್ರೀನಗರ, ಜು 11 (Daijiworld News/MSP): ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ಮುಂದುವರೆದಿದ್ದು, ಕುಪ್ವಾರಾ ಜಿಲ್ಲೆಯ ಉತ್ತರ ಕಾಶ್ಮೀರದ ಹಂದ್ವಾರದ ನೌಗಮ್ ಸೆಕ್ಟರ್ನಲ್ಲಿ ದಾಳಿಗೆ ಹೊಂಚು ಹಾಕಿ ಕುಳಿತಿದ್ದ ಭಯೋತ್ಪಾದಕರನ್ನು ಶನಿವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಸೇನೆ ಮಾಹಿತಿ ನೀಡಿದೆ.
ಕಣಿವೆ ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಯನ್ನು ಗರಿಬಿಚ್ಚತೊಡಗುತ್ತಿದ್ದಂತೆ ಇದನ್ನು ಮಟ್ಟ ಹಾಕುವ ಕೆಲಸದಲ್ಲಿ ಸೇನೆ ತೊಡಗಿಸಿಕೊಂಡಿದೆ . ಹಂದ್ವಾರದ ನೌಗಮ್ ಸೆಕ್ಟರ್ ನಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಸೇನೆಗೆ ಮಾಹಿತಿ ದೊರಕಿ ಭಯೋತ್ಪಾದಕರು ಅಡಗಿದ್ದ ಸ್ಥಳವನ್ನು ಸುತ್ತವರಿದು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ಈ ವೇಳೆ, ಉಗ್ರರು ಸೇನಾಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ಪ್ರತಿಯಾಗಿ ಸೇನಾಪಡೆಯ ಸಿಬ್ಬಂದಿ ಉಗ್ರರ ಮೇಲೆ ಗುಂಡಿನ ಸುರಿಮಳೆಗರೆದರು. ಈ ವೇಳೆ, ಇಬ್ಬರು ಭಯೋತ್ಪಾದಕ ಹತರಾಗಿದ್ದಾರೆ, ಸ್ಥಳದಲ್ಲಿ ಉಗ್ರರ ಬಳಿಯಿದ್ದ ಎಕೆ-47 ರೈಫಲ್ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.