ಮೈಸೂರು, ಜು 11 (DaijiworldNews/PY): ಇಂದು ಕರ್ನಾಟಕದಲ್ಲಿ 1,500 ಪ್ರಕರಣಗಳು ಆಗಲಿದೆ ಎಂದು ಮಧ್ಯವಯಸ್ಕ ವ್ಯಕ್ತಿಯೊಬ್ಬ ಚಹಾ ಅಂಗಡಿಯ ಮುಂದೆ ನಿಂತು ಹೇಳುತ್ತಿರುವುದು, ಫೋನ್ನಲ್ಲಿ ಅವರೊಂದಿಗೆ ಸಂಭಾಷಣೆ ಮಾಡುತ್ತಿರುವ ವ್ಯಕ್ತಿಯು 2,000 ಪ್ರಕರಣಗಳು ಪತ್ತೆಯಾಗುತ್ತವೆ ಎಂದು ಹೇಳಿ ಇಬ್ಬರೂ 500 ರೂ.ಗಳ ಬೆಟ್ಟಿಂಗ್ ಕಟ್ಟುವುದು. ಇದೀಗ ಕರ್ನಾಟಕದಲ್ಲಿ ಕಂಡುಬಂದ ಹೊಸ ರೀತಿಯಾದ ಬೆಟ್ಟಿಂಗ್ ದಂಧೆ.
ಈ ಬೆಟ್ಟಿಂಗ್ನಲ್ಲಿ ಸೋತವನು ಹೆಲ್ತ್ ಬುಲೆಟಿನ್ ಬಿಡುಗಡೆಯಾದ ಕೂಡಲೇ ಪಾವತಿ ಮಾಡಬೇಕು. ಕ್ರಿಕೆಟ್ ಸಂದರ್ಭ ಬೆಟ್ಟಿಂಗ್ ಮಾಡುತ್ತಿದ್ದ ಜನರು ಈಗ ಕೊರೊನಾ ಕಾರಣದಿಂದ ಕ್ರಿಕೆಟ್ ನಡೆಯದ ಕಾರಣ ರಾಜ್ಯದಲ್ಲಿ ಪ್ರತಿದಿನ ವರದಿಯಾಗುವ ಕೊರೊನಾ ಪ್ರಕರಣಗಳನ್ನು ಊಹಿಸುವ ಬೆಟ್ಟಿಂಗ್ ನಡೆಸುತ್ತಿದ್ದಾರೆ.
ಐಪಿಎಲ್ ಸೀಸನ್, ಕ್ರಿಕೆಟ್ ಚುನಾವಣೆ ಮುಂದಾದ ವಿಷಯಗಳ ಬಗ್ಗೆ ಜನರು ಸಾಮಾನ್ಯವಾಗಿ ಬೆಟ್ಟಿಂಗ್ ನಡೆಸುತ್ತಿದ್ದರು. ಆದರೆ, ಕೊರೊನಾ ಕಾರಣದಿಂದ ಎಲ್ಲವೂ ಸ್ಥಗಿತಗೊಂಡಿರುವುದರಿಂದ ಬೆಟ್ಟರ್ಗಳು ಕೊರೊನಾದ ಕಡೆಗೆ ತಿರುಗಿದ್ದು, ಪ್ರತಿದಿನ ಎಷ್ಟು ಪ್ರಕರಣಗಳು ದಾಖಲಾಗುತ್ತವೆ ಎನ್ನುವುದರ ಬಗ್ಗೆ ಬೆಟ್ಟಿಂಗ್ ನಡೆಸುತ್ತಿದ್ದಾರೆ.
ಕರ್ನಾಟಕದಲ್ಲಿ ಇಂದು ಎಷ್ಟು ಕೊರೊನಾ ಪ್ರಕರಣಗಳು ವರದಿಯಾಗಲಿವೆ? ಕೊರೊನಾ ಪಟ್ಟಿಯಲ್ಲಿ ಯಾವ ಜಿಲ್ಲೆ ಅಗ್ರಸ್ಥಾನದಲ್ಲಿದೆ? ಎಂದು ಬೆಟ್ಟಿಂಗ್ ಮಾಡುತ್ತಾರೆ. ಇದನ್ನು ಕೆಲವು ಜನರು ಅಸಹ್ಯಕರವೆಂದುಕೊಂಡರೆ, ಕೆಲವರು ಬಾಜಿ ಕಟ್ಟುತ್ತಾರೆ. ಈ ಬೆಟ್ಟಿಂಗ್ ದಂಧೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿಲ್ಲವಾದರೂ, ಹಳೆಯ ಮೈಸೂರು ಪ್ರದೇಶ, ಚಾಮರಾಜನಗರ ಮತ್ತು ಇತರ ಸ್ಥಳಗಳಲ್ಲಿ ಅನೇಕ ಜನರು ತಮ್ಮ ಅದೃಷ್ಟ ಹೇಗಿದೆಯೋ ಎನ್ನುವ ಪ್ರಯತ್ನ ಮಾಡುತ್ತಿದ್ದಾರೆ.
ಈ ಬಗ್ಗೆ ಮೂಲವೊಂದು ಮಾಹಿತಿಯನ್ನು ಬಹಿರಂಗಪಡಿಸಿದ್ದು, ಗ್ರಾಮೀಣ ಪ್ರದೇಶದ ಹೆಚ್ಚಿನ ಜನರು ಮತ್ತು ಕೊರೊನಾದಿಂದಾಗಿ ಮನೆಗೆ ತೆರಳುವ ಯುವಕರು ತಮ್ಮ ಅದೃಷ್ಟವನ್ನು ಪ್ರಯತ್ನಿಸುತ್ತಿದ್ದಾರೆ ಎಂದಿದೆ.
ಇನ್ನು ಈ ಬೆಟ್ಟಿಂಗ್ ಮಾಡುವವರಿಗೆ ಇರುವ ಪ್ರಯೋಜನವೆಂದರೆ, ಜನರಿಗೆ ಈ ಬೆಟ್ಟಿಂಗ್ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ಜನರು 100, 500 ರೂ.ಗಳಷ್ಟು ಕಡಿಮೆ ಬೆಟ್ಟಿಂಗ್ ಹಾಗೂ ಆನ್ಲೈನ್ ವ್ಯಾಲೆಟ್ಗಳನ್ನು ಬಳಸಿಕೊಂಡು ಪಾವತಿ ಮಾಡುವ ಕಾರಣ ಪೊಲೀಸರಿಗೆ ಕೂಡಾ ಈ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ ಎಂದು ಮೈಸೂರಿನ ಚಹಾ ಅಂಗಡಿಗಳ ಬಳಿಯ ಜನರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಮೂಲವೊಂದು ತಿಳಿಸಿದೆ.
ಕ್ರೈಮ್ ಬ್ರಾಂಚ್ ಪೊಲೀಸ್ ಅಧಿಕಾರಿಯೊಬ್ಬರು, ಇಂತಹ ಯಾವುದೇ ಬೆಟ್ಟಿಂಗ್ ನಡೆಯುತ್ತಿರುವ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.