ಬೆಂಗಳೂರು, ಜು.11 (DaijiworldNews/MB) : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು ದೇಶದಲ್ಲಿ ಕೊರೊನಾ ಸೋಂಕಿತರ ರಾಜ್ಯವಾರು ಪಟ್ಟಿಯಲ್ಲಿ ಕರ್ನಾಟಕವು ಆರನೇ ಸ್ಥಾನದಲ್ಲಿದೆ. ಆದರೆ ಕಳೆದ ಒಂದು ವಾರದಲ್ಲಿ ಸೋಂಕಿನ ಬೆಳವಣಿಗೆ ದರ ಏರಿಕೆಯಲ್ಲಿ ಕರ್ನಾಟಕದಲ್ಲಿ ಶೇ. 10 ರಷ್ಟಿದ್ದು ದೇಶದಲ್ಲಿ ಅಗ್ರ ಸ್ಥಾನದಲ್ಲಿದೆ.
238461 ಪ್ರಕರಣಗಳು ದಾಖಲಾಗುವ ಮೂಲಕ ದೇಶದಲ್ಲೇ ಅಧಿಕ ಕೊರೊನಾ ಸೋಂಕು ದಾಖಲಾದ ರಾಜ್ಯವಾದ ಮಹಾರಾಷ್ಟ್ರದಲ್ಲಿ ಶೇ.3ರಷ್ಟು ಕಳೆದ ಒಂದು ವಾರದಲ್ಲಿ ಸೋಂಕಿನ ಬೆಳವಣಿಗೆ ದರವಿದ್ದರೆ ತಮಿಳುನಾಡಿನಲ್ಲಿ ಶೇ.4, ದಿಲ್ಲಿಯಲ್ಲಿ ಶೇ.4, ಗುಜರಾತ್ ಶೇ.2 ಹಾಗೂ ಉತ್ತರ ಪ್ರದೇಶ ಶೇ.4 ಇದೆ. ಆದರೆ ಕರ್ನಾಟಕದಲ್ಲಿ ಶೇ.10ರಷ್ಟಿದೆ.
ಇನ್ನು ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗುವವರ ಪ್ರಮಾಣ ಮಂದಗತಿಯಲ್ಲಿ ದಾಖಲಾಗುತ್ತಿದ್ದು 33418 ಸೋಂಕಿತರ ಪೈಕಿ 13836 ಮಂದಿ ಗುಣಮುಖರಾಗಿರುವ ಮೂಲಕ ರಾಜ್ಯದಲ್ಲಿ ಶೇ. 41.4ರಷ್ಟು ಮಂದಿ ಗುಣಮುಖರಾದಂತಾಗಿದೆ. ಇನ್ನೂ ಕೂಡಾ 19,035 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಬೆಂಗಳೂರಿನಲ್ಲೇ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಅಲ್ಲಿ ಈವರಗೆ ಶೇ. 22ರಷ್ಟು ಮಂದಿ ಮಾತ್ರ ಗುಣಮುಖರಾಗಿದ್ದಾರೆ. ಏತನ್ಮಧ್ಯೆ ದಿನದ ಗುಣಮುಖದಾದವರ ಸಂಖ್ಯೆಯಲ್ಲಿ ಶುಕ್ರವಾರ ಮೊದಲ ಬಾರಿಗೆ ೧ ಸಾವಿರದ ಗಡಿ ದಾಟಿದೆ.
ರಾಜ್ಯದಲ್ಲಿ 33418 ಮಂದಿಗೆ ಕೊರೊನಾ ಸೋಂಕು ತಗುಲಿದ್ದು 543 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 13836 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು 19039 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.