ಬೆಂಗಳೂರು, ಜು 11 (DaijiworldNews/PY): ಈವರೆಗೆ ಕರ್ನಾಟಕಕ್ಕೆ ಆತ್ಮನಿರ್ಭರ ಯೋಜನೆಯಡಿಯಲ್ಲಿ ಸುಮಾರು 4,267 ಕೋ. ರೂ. ಬಿಡುಗಡೆಯಾಗಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ನಗರದಲ್ಲಿ ಶುಕ್ರವಾರ ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಎಂಎಸ್ಎಂಇ ಕ್ಷೇತ್ರಕ್ಕೆ ನೆರವಾಗಿದೆ. ರಾಜ್ಯದ ಎಂಎಸ್ಎಂಇಗಳಿಗೆ ಸುಮಾರು 2,439 ಕೋ.ರೂ ವಿತರಣೆಯಾಗಿದೆ. ರಾಜ್ಯದ 1,58,786 ಎಂಎಸ್ಎಂಇಗೆ 4,106 ಕೋ. ರೂ. ನೀಡಬೇಕಾಗಿತ್ತು. ರಾಜ್ಯದಲ್ಲಿನ ರಾಜ್ಯದ 3,10,688 ಮಂದಿ ಇಪಿಎಫ್ನ ಅಡಿ ಸುಮಾರು 1,125 ಕೋ. ರೂ. ಹಿಂಪಡೆದುಕೊಂಡಿದ್ದಾರೆ. ರಾಜ್ಯಕ್ಕೆ ಬಿಲ್ಡಿಂಗ್ ಆ್ಯಂಡ್ ಕನ್ಸ್ಟ್ರಕ್ಷನ್ ಫಂಡ್ನಿಂದ 681 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.
ಜನ್ಧನ್ ಬಗ್ಗೆ ಮಾಹಿತಿ ನೀಡಿದ ಅವರು, ಎಪ್ರಿಲ್, ಮೇ, ಜೂನ್ ತಿಂಗಳಿಗೆ ರಾಜ್ಯದ ಸುಮಾರು 88,09,042 ಮಂದಿಯ ಜನಧನ್ ಖಾತೆಗೆ ಒಟ್ಟು ಒಟ್ಟು 161 ಕೋ.ರೂ. ಜಮೆಯಾಗಿದ್ದು, ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿಯೂ ಕೂಡಾ ಸುಮಾರು 48.39 ಲಕ್ಷ ರೈತರಿಗೆ ಒಟ್ಟು 967.81 ಕೋ. ರೂ. ಪಾವತಿಯಾಗಿದೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಅವರಿ ಘೋಷಣೆ ಮಾಡಿರುವ ಆತ್ಮನಿರ್ಭರ ಯೋಜನೆಯಡಿ ಫಲಾಭವಿಗಳಿಗೆ ಪ್ರತಿ ಪೈಸೆಯನ್ನು ತಲುಪುವಂತೆ ಮಾಡುತ್ತೇವೆ. ಈ ವಿಚಾರದಲ್ಲಿ ಏನಾದರೂ ತೊಂದರೆ ಕಂಡುಬಂದಲ್ಲಿ ನಮಗೆ ತಿಳಿಸಿ. ಕೊರೊನಾದ ಈ ಸಂಕಷ್ಟದ ಸಂದರ್ಭದಲ್ಲಿ ಎಲ್ಲರೂ ಕೂಡಾ ಒಂದಾಗಿ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು. ಅದಕ್ಕೆ ಬದಲಾಗಿ ಆರೋಪ ನಡೆಸುವುದು ಒಳ್ಳೆಯದಲ್ಲ ಎಂದು ಹೇಳಿದರು.