ಗದಗ, ಜು 11 (DaijiworldNews/PY): ತಮ್ಮ ಜಮೀನಲ್ಲಿ ಟ್ರಾಕ್ಟರ್ ಟೇಲರ್ನಲ್ಲಿ ಯೋಧರೋರ್ವರು ಸ್ವಯಂ ಕ್ವಾರಂಟೈನ್ಗೆ ಒಳಗಾಗಿ ಇತರರಿಗೆ ಪ್ರೇರಣೆಯಾಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಗದಗ ತಾಲೂಕಿನ ಅಂತೂರು- ಬೆಂತೂರು ಗ್ರಾಮದ ಪ್ರಕಾಶ್ ಹೈಗಾರ್ ಅವರು ಅರುಣಾಚಲ ಪ್ರದೇಶದಲ್ಲಿ ಐಟಿಬಿಎಫ್ ಯೋಧರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಸದ್ಯ ರಜೆಯ ಮೇಲೆ ಊರಿಗೆ ಬಂದಿದ್ದು, ಸ್ವಯಂ ಕ್ವಾರಂಟೈನ್ ಆಗಿದ್ದಾರೆ.
ಪ್ರಕಾಶ್ ಅವರು ಅರುಣಾಚಲ ಪ್ರದೇಶದಿಂದ ಬೆಂಗಳೂರಿಗೆ ವಿಮಾನದ ಮೂಲಕ ಆಗಮಿಸಿದ್ದು, ಬೆಂಗಳೂರಿನಲ್ಲಿ ಅವರಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ಈ ವೇಳೆ ಅವರಿಗೆ ನೆಗೆಟಿವ್ ಬಂದಿತ್ತು. ಆದರೆ, ಬೆಂಗಳೂರಿನ ವೈದ್ಯರು ಅವರಿಗೆ ಹೋಂಕ್ವಾರಂಟೈನ್ನಲ್ಲಿರಲು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ ಪ್ರಕಾಶ್ ಅವರು, ನನ್ನಿಂದಾಗಿ ಯಾರಿಗೂ ಸೋಂಕು ಹರಡಬಾರದು ಎಂದು ತಮ್ಮ ಜಮೀನಿನಲ್ಲಿ ರಾತ್ರಿ-ಹಗಲು, ಮಳೆ-ಗಾಳಿ ಎನ್ನದೇ ಜೀವನ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ನಮ್ಮದು ಅವಿಭಕ್ತ ಕುಟುಂಬ. ಹಾಗಾಗಿ ನಾನು ಹೊಲದಲ್ಲಿ ಸ್ವಯಂ ಕ್ವಾರಂಟೈನ್ ಆಗಿದ್ದೇನೆ. ಸ್ವಯಂ ಕ್ವಾರಂಟೈನ್ ಕಾರಣದಿಂದ 14 ದಿನ ನನ್ನ ಊರಿನಲ್ಲಿಯೇ ಕಳೆದಂತಾಗುತ್ತದೆ. ಕೊರೊನಾ ಟೆಸ್ಟ್ ಮಾಡಿದ್ದ ಸಂದರ್ಭ ನೆಗೆಟಿವ್ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಹಾಗೂ ಸುರಕ್ಷತೆಯ ನಿಟ್ಟಿನಲ್ಲಿ, ಮನೆಯವರಿಗೆ ಹಾಗೂ ಊರಿನವರಿಗೆ ತೊಂದರೆಯಾಗಬಾರದು ಎನ್ನುವ ಕಾರಣದಿಂದ ನಾನೇ ನಮ್ಮ ಹೊಲದಲ್ಲಿ ಸ್ವಯಂ ಕ್ವಾರಂಟೈನ್ ಆಗಿದ್ದೇನೆ ಎಂದು ತಿಳಿಸಿದ್ಧಾರೆ.
ಪ್ರಕಾಶ್ ಅವರು ಈಗಾಗಲೇ 6 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದು, ಇನ್ನುಳಿದಂತೆ 8 ದಿನಗಳು ಮಾತ್ರ ಬಾಕಿ ಇವೆ. ಪ್ರಕಾಶ್ ಅವರಿಗೆ ಅವರ ಸಹೋದರರು ಮನೆಯಲ್ಲಿ ತಯಾರಿಸಿದ ಆಹಾರವನ್ನು ತಂದು ಕೊಡುತ್ತಾರೆ. ಆದರೆ, ಅವರ ಸಹೋದರರು 5 ಮೀಟರ್ ದೂರದಲ್ಲಿಯೇ ಆಹಾರ ಇಟ್ಟು ಹೋಗುತ್ತಾರೆ.
ರಜೆಯ ಮೇರೆಗೆ ಊರಿಗೆ ಬರುವುದು ದೃಢವಾಗಿದ್ದು, ಈ ವೇಳೆ ಕ್ವಾರಂಟೈನ್ ಕೂಡಾ ಕಡ್ಡಾಯ ಎಂದು ತಿಳಿದಿದ್ದ ಅವರು, ಜಿಲ್ಲಾಡಳಿತದ ಅನುಮತಿ ಪಡೆದುಕೊಂಡು ತಮ್ಮ ಹೊಲದಲ್ಲಿಯೇ ತಮ್ಮ ಟ್ರಾಕ್ಟರ್ ಟೇಲರ್ಗಳನ್ನು ತಂದು ನಿಲ್ಲಿಸಿ, ಅದರ ಸುತ್ತಲೂ ಸುಮಾರು 30ಅಡಿಗೂ ಅಧಿಕ ಕಂಬಗಳನ್ನು ಹಾಕಿಕೊಂಡು ಹಗ್ಗ ಕಟ್ಟಿಕೊಂಡು ಅಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ತಾವೇ ತಮ್ಮ ಬಟ್ಟೆಗಳನ್ನು ತೊಳೆದು, ಅಲ್ಲಿಯೇ ಒಣಗಿಸಿ, ಅಲ್ಲೇ ಸ್ನಾನ ಮಾಡಿ, ತಮ್ಮ ಪ್ರತಿದಿನ ಕೆಲಸ-ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.