ಬೆಂಗಳೂರು, ಜು.11 (DaijiworldNews/MB) : ''750 ಮೆಗಾವ್ಯಾಟ್ ರೇವಾ ಸೌರ ಯೋಜನೆ ಏಷ್ಯಾದಲ್ಲೇ ಅತೀ ದೊಡ್ಡ ಎಂದು ಹೇಳಿರುವ ಪ್ರಧಾನಿ ಮೋದಿಯವರ ಕಾಲೆದಿರುವ ಕಾಂಗ್ರೆಸ್ ರೇವಾ ಯೋಜನೆ ಏಷ್ಯಾದಲ್ಲೇ ದೊಡ್ಡದಾದರೆ ಕರ್ನಾಟಕದ ಪಾವಗಡದ ಸೌರ ಸ್ಥಾವರ ಏನು?'' ಎಂದು ಪ್ರಶ್ನಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಧ್ಯಪ್ರದೇಶದ 750 ಮೆಗಾವ್ಯಾಟ್ ರೇವಾ ಸೌರ ವಿದ್ಯುತ್ ಯೋಜನೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಪ್ರಧಾನ ಮಂತ್ರಿ ಕಚೇರಿಯ ಪತ್ರಿಕಾ ಪ್ರಕಟಣೆ ಇದು ಏಷ್ಯಾದ ಅತಿದೊಡ್ಡ ವಿದ್ಯುತ್ ಯೋಜನೆ ಎಂದು ಹೇಳಿದೆ.
ಇದೀಗ ಈ ವಿಚಾರವಾಗಿ ಕೇಂದ್ರ ಸರ್ಕಾರವನ್ನು ವ್ಯಂಗ್ಯ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ''ಮಧ್ಯಪ್ರದೇಶದ 750 ಮೆಗಾವ್ಯಾಟ್ ರೇವಾ ಸೌರ ಯೋಜನೆಯನ್ನು ಉದ್ಘಾಟಿಸಿರುವ ಬಿಜೆಪಿ ಕೇಂದ್ರ ಸರ್ಕಾರ ಏಷ್ಯಾದ ಅತಿದೊಡ್ಡ ಸೌರ ಸ್ಥಾವರ ಎಂದು ಹೇಳಿಕೊಂಡಿದೆ. ಹಾಗಾದರೆ ಕಾಂಗ್ರೆಸ್ ಕರ್ನಾಟಕದಲ್ಲಿ ಇದ್ದ ಸಂದರ್ಭದಲ್ಲಿ ಕೇವಲ 3 ವರ್ಷಗಳಲ್ಲಿ ನಿರ್ಮಿಸಲಾದ 2018 ರಿಂದ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕದ ಪಾವಗಡದಲ್ಲಿ 2000 ಮೆಗಾವ್ಯಾಟ್ ಸೌರ ಸ್ಥಾವರ ಏನು?'' ಎಂದು ಪ್ರಶ್ನಿಸಿದ್ದಾರೆ.
''2000 ಮೆಗಾವ್ಯಾಟ್ ಪಾವಗಡ ಮೆಗಾ ಸೌರ ಉದ್ಯಾನದ ವಿಶಿಷ್ಟ ವಿಷಯವೆಂದರೆ ರೈತರಿಂದ ಒಂದು ಎಕರೆ ಭೂಮಿಯನ್ನು ಸಹ ಸ್ವಾಧೀನಪಡಿಸಿಕೊಂಡಿಲ್ಲ. 13,000 ಎಕರೆಗಳನ್ನು ಕೂಡಾ ರೈತರಿಗೆ ವಾರ್ಷಿಕ ಬಾಡಿಗೆ ನೀಡುವ ಮೂಲಕ ಗುತ್ತಿಗೆಗೆ ಪಡೆಯಲಾಗಿದೆ. ಈ ಕರ್ನಾಟಕ ಸೌರ ಸ್ಥಾವರ ಭಾರತದಲ್ಲೇ ಅತ್ಯುತ್ತಮವಾದದ್ದು'' ಎಂದು ಹೇಳಿದ್ದಾರೆ.
ಇನ್ನು ಮಾಜಿ ಸಚಿವ ಡಾ. ಎಚ್ಸಿ ಮಹಾದೇವಪ್ಪ ಅವರು ಟ್ವೀಟ್ ಮಾಡಿದ್ದು, ''ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಾವಗಡದ ಬಳಿ ನಿರ್ಮಿಸಲಾದ ಸೋಲಾರ್ ಪಾರ್ಕ್ ಏಷ್ಯಾಕ್ಕೆ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿಯೇ ಅತಿದೊಡ್ಡ ಸೋಲಾರ್ ಪಾರ್ಕ್ ಎಂದು ಹೆಸರು ಪಡೆದಿದೆ. ಹೀಗಿರುವಾಗ ಕರ್ನಾಟಕದ ಒಳಗೇ ಇರುವ ಸುದ್ದಿ ವಾಹಿನಿಯೊಂದಕ್ಕೆ ಈ ಸಣ್ಣ ಸಂಗತಿಯು ತಿಳಿಯದೇ ಹೋಯಿತೇ?'' ಎಂದು ಪ್ರಶ್ನಿಸಿದ್ದಾರೆ.