ಮಡಿಕೇರಿ, ಜು 11 (Daijiworld News/MSP): ಪಿಪಿಇ ಕಿಟ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನೋ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೊದಲು ತಮ್ಮ ಮುಖ ಕನ್ನಡಿಯಲ್ಲಿ ನೋಡಿಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
ಮಡಿಕೇರಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, " ಸಿದ್ದರಾಮಯ್ಯನವರಿಗೆ , ಆರೋಪ ಮಾಡುವುದು ಸುಲಭ ಕೆಲಸ . ಹಗರಣವಾಗಿದೆ ಎಂದು ಅವರಿಗೆ ಕಂಡುಬಂದಿದ್ದರೆ ಈವರೆಗೆ ದಾಖಲೆಗಳೇಕೆ ಬಿಡುಗಡೆ ಮಾಡಲಿಲ್ಲ" ಎಂದು ಪ್ರಶ್ನಿಸಿದರು.
" ನನಗೆ ದೊರಕಿದ ಮಾಹಿತಿ ಪ್ರಕಾರ ಪಿಪಿಇ ಕಿಟ್ ಖರೀದಿಯಲ್ಲಿ ಯಾವುದೇ ರೀತಿಯ ಹಗರಣ ನಡೆದಿಲ್ಲ . ಭ್ರಷ್ಟಾಚಾರ ನಡೆದಿದೆ ಎನ್ನುವುದಾದರೆ ಮೊದಲು ಇಂದಿರಾ ಕ್ಯಾಂಟೀನ್ನಲ್ಲಿ ನಡೆದಿದ್ದ ಹಗರಣದ ದಾಖಲೆ ಬಿಡುಗಡೆ ಮಾಡಲಿ. ಸುಖಾಸುಮ್ಮನೆ ಆಧಾರ ರಹಿತ ಆರೋಪ ಮಾಡುವುದು ಯಾರಿಗೂ ಒಳ್ಳೆಯದಲ್ಲ. ಮೈತ್ರಿ ಸರ್ಕಾರದ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ನಲ್ಲೂ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿತ್ತು. ನಾವು ಈ ಬಗ್ಗೆ ಪ್ರಸ್ತಾಪ ಮಾಡಿದ್ದರೂ ಅಂದಿನ ಸರ್ಕಾರ ಹಗರಣವನ್ನೇ ಮುಚ್ಚಿ ಹಾಕಿತು. ಈಗ ಅವರಿಗೆ ನಮ್ಮ ಸರ್ಕಾರದ ವಿರುದ್ದ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
"ಸಿಎಂ ಯಡಿಯೂರಪ್ಪ ಹಾಗೂ ಇಲಾಖೆಗೆ ಸಂಬಂಧಿಸಿದ ಸಚಿವರೇ ದಾಖಲೆಗಳನ್ನು ಬಿಡುಗಡೆ ಮಾಡಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ಆರೋಪಿಸುವ ಬದಲು ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಿ" ಎಂದು ಕಟೀಲ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.