ನವದೆಹಲಿ, ಜು 11 (DaijiworldNews/PY): ಕಳೆದ ನೂರು ವರ್ಷಗಳಲ್ಲೇ ಭಾರತದಲ್ಲಿ ಇದೇ ಮೊದಲ ಬಾರಿ ಕೊರೊನಾದಿಂದಾಗಿ ಅತಿ ಕೆಟ್ಟ ಆರ್ಥಿಕ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಶನಿವಾರ ಭಾರತೀಯ ಸ್ಟೇಟ್ ಬ್ಯಾಂಕ್ನ ಮುಖ್ಯಸ್ಥ ರಜನೀಶ್ ಕುಮಾರ್ ಅವರೊಂದಿಗೆ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ವಿಡಿಯೋ ಸಂವಾದ ನಡೆಸಿದ್ದು, ಈ ಸಂದರ್ಭ ಕೊರೊನಾ ಲಾಕ್ಡೌನ್ನಿಂದಾದ ಉಂಟಾದ ಆರ್ಥಿಕತೆಯನ್ನು ಮತ್ತೆ ಹೇಗೆ ಬಲಪಡಿಸಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಲಾಯಿತು.
ಬಳಿಕ ಮಾತನಾಡಿದ ಅವರು, ಭಾರತದಲ್ಲಿ ನೂರು ವರ್ಷಗಳಲ್ಲಿ ಇದೇ ಮೊದಲ ಬಾರಿ ಕೊರೊನಾ ಕಾರಣದಿಂದ ಕೆಟ್ಟದಾದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಆರ್ಥಿಕ ಸಂಕಷ್ಟದೊಂದಿಗೆ ಆರೋಗ್ಯ ಸಮಸ್ಯೆಯೂ ಕೂಡಾ ಕಾಡುತ್ತಿದೆ. ಆರ್ಬಿಐ ಫೆಬ್ರವರಿಯಿಂದ ರೆಪೋ ದರವನ್ನು 250 ಬೇಸಿಸ್ ಪಾಯಿಂಟ್ಗಳನ್ನು ಕಡಿತ ಮಾಡಿದ್ದು, ಸುಮಾರು 9.57 ಲಕ್ಷ ಕೋಟಿ ರೂಪಾಯಿ ಮೊತ್ತದ ಕ್ರಮಗಳನ್ನು ಪ್ರಕಟಪಡಿಸಿದೆ. ಆರ್ಬಿಐಯ ಮುಖ್ಯ ಉದ್ದೇಶವೆಂದರೆ ಅದು ಆರ್ಥಿಕತೆಯನ್ನು ಬಲಪಡಿಸುವುದು. ಈ ನಿಟ್ಟಿನಲ್ಲಿ ಭಾರತದ ಹಣಕಾಸು ವ್ಯವಸ್ಥೆಯನ್ನು ಬಲಪಡಿಸಲು ಆರ್ಬಿಐ ಸಾಕಷ್ಟು ಐತಿಹಾಸಿಕ ಯೋಜನೆಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.