ಮುಂಬೈ, ಜು.11 (DaijiworldNews/MB) : ''ಮತದಾರರನ್ನು ರಾಜಕಾರಣಿಗಳು ಕೇವವವಾಗಿ ಕಾಣಬಾರದು, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿಯಂತಹ ಪ್ರಬಲ ನಾಯಕರೂ ಕೂಡಾ ಚುನಾವಣೆಯಲ್ಲಿ ಸೋತಿದ್ದಾರೆ'' ಎಂದು ಎನ್ಸಿಪಿಯ ಅಧ್ಯಕ್ಷ ಶರದ್ ಪವಾರ್ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಶಿವಸೇನೆ ಮುಖವಾಣಿ ಸಾಮ್ನಾಕ್ಕೆ ನೀಡಿದ ಸಂದರ್ಶನದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಗಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನಾನು ಮತ್ತೆ ಅಧಿಕಾರಕ್ಕೆ ಬರುತ್ತೇನೆ ಎಂಬ ಚುನಾವಣಾ ಘೋಷಣೆಯ ಬಗ್ಗೆ ಉಲ್ಲೇಖ ಮಾಡಿ ಮಾತನಾಡಿದ ಅವರು, ''ಪ್ರಜಾಪ್ರಭುತ್ವ ದೇಶದಲ್ಲಿ ಯಾವುದೂ ಕೂಡಾ ಶಾಶ್ವತವಾಗಿ ಇರುವುದಿಲ್ಲ. ನಾವು ಮತದಾರರನ್ನು ಕೇವಲವಾಗಿ ನೋಡಿದರೆ ಅದರ ಪ್ರತಿಫಲ ಚುನಾವಣೆಯಲ್ಲಿ ಲಭಿಸುತ್ತದೆ. ಇದು ಅಹಂಕಾರದ ಮಾತು. ಆದ್ದರಿಂದ ಮತದಾರರು ನಂತರದ ಚುನಾವಣೆಯಲ್ಲಿ ಸೋಲಿಸುವ ಮೂಲಕ ಸರಿಯಾದ ಉತ್ತರ ನೀಡಿದ್ದಾರೆ'' ಎಂದು ಫಡ್ನವೀಸ್ ಅವರನ್ನು ಟೀಕೆ ಮಾಡಿದರು.
''ಜನರು ಪ್ರಜಾಪ್ರಭುತ್ವ ಹಕ್ಕುಗಳ ವಿಷಯದಲ್ಲಿ ರಾಜಕಾರಣಿಗಳಿಗಿಂತ ಬುದ್ಧಿವಂತರಾಗಿದ್ದಾರೆ. ಜನರು ಎಂದಿಗೂ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ದುರಹಂಕಾರದ ಮಾತನ್ನು ಇಷ್ಟಪಡುವುದಿಲ್ಲ. ಅದಕ್ಕೆ ತಕ್ಕುದಾದ ಶಾಸ್ತಿ ಮಾಡುತ್ತಾರೆ'' ಎಂದು ಹೇಳಿದ ಅವರು, ''ಮಹಾರಾಷ್ಟ್ರ ಸರ್ಕಾರದ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ.