ಬೆಂಗಳೂರು, ಜು 11 (DaijiworldNews/PY): ಮೊದಲು ಕಾಂಗ್ರೆಸ್ ನಾಯಕರು ಮೊಸರಿನಲ್ಲಿ ಕಲ್ಲು ಹುಡುಕುವ ಕಾರ್ಯವನ್ನು ಬಿಡಬೇಕು. ಇಲ್ಲವಾದಲ್ಲಿ ನಾನು ಈಗ ಬಾಯಿ ಬಿಡಬೇಕಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಗರಂ ಆಗಿದ್ದಾರೆ.
ಶನಿವಾರ ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಕಾಂಗ್ರೆಸ್ಸಿಗರು ಸುಖಾಸುಮ್ಮನೆ ಆರೋಪ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಯಾರು ಎಲ್ಲೆಲ್ಲಿಗೆ ತೆರಳಿ ಎಷ್ಟು ಲೂಟಿ ಮಾಡಿದ್ದಾರೆ ಎನ್ನುವ ವಿಚಾರವನ್ನು ನಾನು ಹೇಳಬೇಕಾಗುತ್ತದೆ ಎಂದರು.
ರಾಜ್ಯದಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳು ಅಲಂಕಾರಕ್ಕೆ ಇರುವುದು ಬೇಡ. ಕೊರೊನಾಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಕೊರೊನಾ ರಿಪೋರ್ಟ್ಗಳು ಬಾಕಿ ಇವೆ. ಖಾಸಗಿ ಲ್ಯಾಬ್ಗಳು ಈ ವಿಚಾರದಲ್ಲಿ ಸಹಕಾರ ನೀಡದ ಕಾರಣ, ಸರ್ಕಾರಿ ಲ್ಯಾಬ್ಗಳ ಮೇಲೆ ಎಲ್ಲಾ ಲೋಡ್ಗಳು ಬಿದ್ದ ಪರಿಣಾಮ ವರದಿಗಳು ವಿಳಂಬವಾಗಿದೆ. ಖಾಸಗಿ ಮೆಡಿಕಲ್ ಕಾಲೇಜುಗಳ ವಿರುದ್ದ ಸೂಕ್ತವಾದ ಕ್ರಮತೆಗೆದುಕೊಳ್ಳುತ್ತೇವೆ ಎಂದರು.
ಲ್ಯಾಬ್ಗಳು ಇವೆ ಎಂದರೆ ಟೆಸ್ಟ್ಗಳನ್ನು ನಡೆಸಲೇಬೇಕು. ಸರ್ಕಾರದಿಂದ ಪ್ರತೀ ಟೆಸ್ಟ್ಗೆ 2250 ರೂ. ನಂತೆ ಹಣ ನೀಡುತ್ತಿದ್ದು, ಸ್ಯಾಂಪಲ್ಗನ್ನು ನಾವೇ ಕೊಟ್ಟು, ಹಣವನ್ನು ಕೂಡಾ ನಾವೇ ನೀಡುತ್ತೇವೆ. ಇಷ್ಟು ಮಾಡಿದರೂ ಕೂಡಾ ಕೆಲವು ಖಾಸಗಿ ಸಂಸ್ಥೆಗಳು ನಮಗೆ ಸರಿಯಾಗಿ ಸಹಕಾರ ನೀಡುತ್ತಿಲ್ಲ. ಈ ಕಾರಣದಿಂದ ಅಂತವರ ವಿರುದ್ದ ಕ್ರಮತೆಗೆದುಕೊಳ್ಳುತ್ತೇವೆ. ಅವರು ಸಹಕಾರ ನೀಡದಿದ್ದರೆ, ಸರ್ಕಾರಕ್ಕೆ ಅವರನ್ನು ಸರಿಯಾದ ಮಾರ್ಗಕ್ಕೆ ತರಬೇಕು ಎಂದು ಗೊತ್ತಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ನಡೆಸಿದ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರು ಮೊದಲು ಸತ್ಯ ಏನೆಂಬುವುದನ್ನು ತಿಳಿದುಕೊಳ್ಳಲಿ, ಬಳಿಕ ಆರೋಪ ಮಾಡಲಿ. ಈ ವಿಚಾರದ ಬಗ್ಗೆ ಆರೋಗ್ಯ ಇಲಾಖೆಯವರು ಪಾರದರ್ಶಕವಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದನ್ನು ಡಾ. ಮಂಜುನಾಥ್ ಅವರು ಶಿಫಾರಸ್ಸು ಮಾಡಿದ್ದಾರೆ ಎಂದರು.