ಜೈಪುರ, ಜು.11 (DaijiworldNews/MB) : ''ಕಾಂಗ್ರೆಸ್ ಮುಕ್ತ ಭಾರತ್ ಮಾಡುತ್ತೇವೆಂದ ಬಿಜೆಪಿಗೆ ಈಗ ನಮ್ಮನ್ನು ಕಂಡರೆಯೇ ಭಯ'' ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಬಿಜೆಪಿಯನ್ನು ವ್ಯಂಗ್ಯ ಮಾಡಿದ್ದಾರೆ.
ಈ ಬಗ್ಗೆ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಕಾಂಗ್ರೆಸ್ ಮುಕ್ತ ಭಾರತ್ ಮಾಡುತ್ತೇವೆ ಎಂದು ಹೇಳುತ್ತಿದ್ದ ಬಿಜೆಪಿಗೆ ಈಗ ಕಾಂಗ್ರೆಸ್ನ್ನು ಕಂಡರೆಯೇ ಭಯವಾಗುತ್ತದೆ. ಬಿಜೆಪಿ 15 ಕೋಟಿ ನೀಡಿ ಸರ್ಕಾರ ಉಡುಳಿಸುವ ಯತ್ನ ಮಾಡುತ್ತಿದೆ. ಆದರೆ ಸರ್ಕಾರ ಮಾತ್ರ ಸ್ಥಿರವಾಗಿದೆ'' ಎಂದು ಹೇಳಿದರು.
''ಈ ಸಂದರ್ಭದಲ್ಲಿ ಸರ್ಕಾರ ಅವಶ್ಯವಾಗಿ ಮಾಡಬೇಕಾದ ಕೆಲಸಗಳನ್ನು ಮಾಡುವ ಮೂಲಕ ಕೊರೊನಾ ಸೋಂಕಿನ ವಿರುದ್ಧದ ಹೋರಾಟವನ್ನುಮುಂದುವರಿಸಿದೆ. ಆದರೆ ಬಿಜೆಪಿ ನಮ್ಮ ಸರ್ಕಾರವನ್ನು ಉರುಳಿಸುವ ಯತ್ನದಲ್ಲೇ ತೊಡಗಿದೆ. ಆದರೆ ಸರ್ಕಾರ ಸ್ಥಿರವಾಗಿದೆ. ಪೂರ್ಣ ಅವಧಿಯಲ್ಲಿ ನಾವೇ ಆಲ್ವಿಕೆ ನಡೆಸಿ ಮುಂದಿನ ಚುನಾವಣೆ ಗೆಲ್ಲುವ ಬಗ್ಗೆಯೂ ತಯಾರಿ ನಡೆಯುತ್ತಿದೆ'' ಎಂದಿದ್ದಾರೆ.
''ಸರ್ಕಾರವನ್ನು ಬೀಳಿಸುವ ಯತ್ನಗಳು ವಾಜಪೇಯಿ ಅವರ ಕಾಲದಲ್ಲಿ ನಡೆಯುತ್ತಿರಲಿಲ್ಲ. ಆದರೆ, 2014ರಿಂದ ಈಚೆಗೆ ಧರ್ಮದ ಆಧಾರದಲ್ಲಿ ಈ ಸರ್ಕಾರ ಒಡೆದು ಆಳುತ್ತಿದೆ'' ಎಂದು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.