ಬೆಂಗಳೂರು, ಜು 11 (Daijiworld News/MSP): ರಾಜ್ಯದಲ್ಲಿ ಅನಿಯಂತ್ರಿತವಾಗಿ ಏರಿಕೆಯಾಗುತ್ತಲೇ ಇರುವ ಕೊರೊನಾ ರಾಜ್ಯ ಸರ್ಕಾರಕ್ಕೂ ಸವಾಲಾಗಿ ಪರಿಣಮಿಸಿದ್ದು, ಈ ಹಿನ್ನಲೆಯಲ್ಲಿ ಮತ್ತಷ್ಟು ಹೆಚ್ಚಿನ ಪರೀಕ್ಷೆಯನ್ನು ನಡೆಸಲು ಇಚ್ಚಿಸಿದ್ದು, ಶನಿವಾರದಿಂದ ರಾಜ್ಯದಲ್ಲಿ ಸೋಂಕಿತರನ್ನು ಪತ್ತೆ ಹಚ್ಚಲು ಆ್ಯಂಟಿಜೆನ್ ಕೊವೀಡ್ ಪರೀಕ್ಷಾ ಕಿಟ್ ಬಳಕೆಗೆ ಮುಂದಾಗಿದೆ.
ಈ ಬಗ್ಗೆ ಸಚಿವ ಸುಧಾಕರ್ ಅವರು ಮಾಹಿತಿ ನೀಡಿದ್ದು, ತುರ್ತಾಗಿ ಪರೀಕ್ಷೆಗಳನ್ನು ನಡೆಸುವ ಆ್ಯಂಟಿಜೆನ್ ಕೊವೀಡ್ ಪರೀಕ್ಷಾ ಕಿಟ್ ಇನ್ಮುಂದೆ ಬಳಕೆಗೆ ನಿರ್ಧರಿಸಿದ್ದು ಕೊರೊನಾ ಸೋಂಕು ತಗುಲಿದೆಯೇ ಇಲ್ಲವೇ ಎನ್ನುವುದು ಕೇವಲ 20 ನಿಮಿಷಗಳಲ್ಲಿ ದೃಢಪಡಲಿದೆ ಎಂದಿದ್ದಾರೆ.
" ಸರ್ಕಾರ 1 ಲಕ್ಷ ಆ್ಯಂಟಿಜೆನ್ ಕೊವೀಡ್ ಪರೀಕ್ಷಾ ಕಿಟ್ ಖರೀದಿಸಿದ್ದು, ಅತೀ ಹೆಚ್ಚು ಸೋಂಕಿತರಿರುವ ಬೆಂಗಳೂರಿನಲ್ಲಿ 20,000 ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಇನ್ನೂ 2 ಲಕ್ಷ ಕಿಟ್ ಗಳನ್ನು ಸರ್ಕಾರ ಖರೀದಿಲು ಮುಂದಾಗಿದ್ದು ಈ ಪೈಕಿ ಬೆಂಗಳೂರಿನಲ್ಲಿ 50,000 ಕಿಟ್ ಬಳಕೆ ಮಾಡಲಿದ್ದೇವೆ. ಈಗಾಗಲೇ 50,000 ಕಿಟ್ ಗಳನ್ನು ವಿವಿಧ ಜಿಲ್ಲೆಗಳಿಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.