ನವದೆಹಲಿ, ಜು.11 (DaijiworldNews/MB) : ದೇಶಿಯ ಟ್ರೈನ್ 18 ಯೋಜನೆಗೆ ಕರೆಯಲಾಗಿದ್ದ ಟೆಂಡರ್ನಲ್ಲಿ ಚೀನಾದ ಸರ್ಕಾರಿ ಸ್ವಾಮ್ಯದ ಸಂಸ್ಥೆ ಸಿಆರ್ಆರ್ ಕಾರ್ಪೋರೇಷನ್ ಕೂಡಾ ಭಾಗಿಯಾಗಿದೆ ಎಂದು ತಿಳಿದು ಬಂದಿದೆ.
ಡಿಸೆಂಬರ್ನಲ್ಲಿ ವಂದೇ ಭಾರತ್ ಎಂಬ ಹೆಸರಿನಡಿ ಸಂಚಾರ ಮಾಡುವ ದೇಶಿಯ ಸೆಮಿ-ಹೈಸ್ಪೀಡ್ ರೈಲು ಟ್ರೈನ್ 18 ಯೋಜನೆಯ ಮುಂದಿನ ಭಾಗವಾಗಿ 44 ಟ್ರೈನ್ ಗಳನ್ನು ತಯಾರಿಸಲಾಗುತ್ತಿದ್ದು, ಎಲೆಟ್ರಿಕ್ ಟ್ರಾಕ್ಷನ್ ಕಿಟ್ಗಳಿಗೆ ಪ್ರೊಪಲ್ಷನ್ ಸಿಸ್ಟಮ್ಗಳನ್ನು ಪೂರೈಸಲು ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್ಗೆ 6 ಕಂಪನಿಗಳು ಅರ್ಜಿ ಸಲ್ಲಿಸಿದ್ದವು. ಈ ಪೈಕಿ ಏಕೈಕ ವಿದೇಶಿ ಸಂಸ್ಥೆ ಚೀನಾದ ಸರ್ಕಾರಿ ಸ್ವಾಮ್ಯದ ಸಿಆರ್ ಆರ್ ಕಾರ್ಪೊರೇಷನ್ ಕೂಡಾ ಒಂದಾಗಿದೆ.
ಉಳಿದಂತೆ ಭಾರತ್ ಹೆವಿ ಎಲೆಕ್ಟ್ರಿಕಲ್ಸ್, ಹೈದರಾಬಾದ್ ನ ಮೂಲದ ಮೇಧಾ ಗ್ರೂಪ್, ಎಲೆಕ್ಟ್ರೋ ವೇವ್ಸ್ ಎಲೆಕ್ಟ್ರಾನಿಕ್ ಪ್ರೈವೆಟ್ ಲಿಮಿಟೆಡ್ ಹಾಗೂ ಮುಂಬೈ ಮೂಲದ ಪವರ್ನೆಟಿಕ್ಸ್ ಎಕ್ವಿಪ್ಮೆಂಟ್ಸ್ ಪ್ರೈವೆಟ್ ಲಿಮಿಟೆಡ್ ಸಹ ಟೆಂಡರ್ ನಲ್ಲಿ ಭಾಗವಹಿಸಿವೆ.
ಕಳೆದ ವರ್ಷ 100 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾದ ಮೊದಲ ಟ್ರೈನ್ 18 ಬಿಡುಗಡೆಯಾಗಿದ್ದು ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು ’ಅದರ ಎಲೆಟ್ರಿಕ್ ಟ್ರಾಕ್ಷನ್ ಕಿಟ್ ನ ಪ್ರೊಪಲ್ಷನ್ ಸಿಸ್ಟಮ್ಗಳಿಗಾಗಿಯೇ 35 ಕೋಟಿ ರೂಪಾಯಿ ವೆಚ್ಚವಾಗಿದೆ. ಇನ್ನು 44 ಟ್ರೈನ್ಗಳಿಗೆ 1,500 ಕೋಟಿ ರೂಪಾಯಿಗಳಾಗುತ್ತವೆ ಎಂದು ತಿಳಿಸಿದ್ದಾರೆ.