ತಮಿಳುನಾಡು, ಜು 11 (DaijiworldNews/PY): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ಬಿಐ) ನಕಲಿ ಶಾಖೆ ನಡೆಸುತ್ತಿದ್ದ ಎಸ್ಬಿಐ ಮಾಜಿ ಉದ್ಯೋಗಿ ಪುತ್ರ ಸೇರಿದಂತೆ ಮೂವರನ್ನು ಶುಕ್ರವಾರ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಬಂಧಿತ ಮೂವರಲ್ಲಿ ಓರ್ವ ಮಾಜಿ ಎಸ್ಬಿಐಯ ಬ್ಯಾಂಕ್ ಉದ್ಯೋಗಿಯ ಮಗ ಕಮಲ್ ಬಾಬು (19) ಎನ್ನಲಾಗಿದೆ.
ಇದನ್ನು ಎಸ್ಬಿಐ ಗ್ರಾಹಕರೊಬ್ಬರು ಗಮನಿಸಿ ತಮ್ಮ ಶಾಖಾ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದಾಗ ತಮಿಳುನಾಡಿನ ಪನ್ರುತಿ ಪ್ರದೇಶದಲ್ಲಿ ನಕಲಿ ಶಾಖೆ ಇರುವುದು ಪತ್ತೆಯಾಗಿದೆ. ಈ ವಿಷಯವನ್ನು ನಂತರ ವಲಯ ಕಚೇರಿಗೆ ತಿಳಿಸಲಾಗಿದ್ದು, ಎಸ್ಬಿಐನ ಎರಡು ಶಾಖೆಗಳು ಮಾತ್ರ ಪನ್ರುತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಹಾಗೂ ಈ ಪ್ರದೇಶದಲ್ಲಿ ಮೂರನೇ ಶಾಖೆಯನ್ನು ತೆರೆಯಲಾಗಿಲ್ಲ ಎಂದು ತಿಳಿಸಿದೆ ಎಂಬುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಎಸ್ಬಿಐ ಅಧಿಕಾರಿಗಳು ನಕಲಿ ಶಾಖೆಗೆ ಭೇಟಿ ನೀಡಿದ್ದು, ಈ ವೇಳೆ ಎಸ್ಬಿಐ ಬ್ಯಾಂಕ್ನಂತೆ ಸಂಪೂರ್ಣವಾಗಿ ರಚನೆಯಾಗಿದ್ದನ್ನು ಕಂಡು ಚಕಿತರಾಗಿದ್ದಾರೆ. ತಕ್ಷಣವೇ ಎಸ್ಬಿಐ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ವರದಿಯ ಪ್ರಕಾರ, ನಕಲಿ ಶಾಖೆಯ ಮಾಸ್ಟರ್ ಮೈಂಡ್, ನಿರುದ್ಯೋಗಿ ಯುವಕ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ, ಅವರ ಪೋಷಕರು ಮಾಜಿ ಬ್ಯಾಂಕ್ ಉದ್ಯೋಗಿಗಳಾಗಿದ್ದರು. ಓರ್ವ, ರಶೀದಿಗಳನ್ನು, ಚಲನ್ಗಳನ್ನು ಮುದ್ರಿಸಿದ ಸ್ಥಳದಿಂದ ಮುದ್ರಣಾಲಯವನ್ನು ನಡೆಸುತ್ತಿದ್ದು, ಇನ್ನೋರ್ವ ರಬ್ಬರ್ ಅಂಚೆಚೀಟಿಗಳನ್ನು ಮುದ್ರಿಸುತ್ತಿದ್ದ ಎನ್ನಲಾಗಿದೆ.
ಇದಕ್ಕೂ ಮುನ್ನ 2018 ರಲ್ಲಿ ಕರ್ನಾಟಕ ಬ್ಯಾಂಕ್ನ ಹೆಸರಿನಲ್ಲಿ ನಕಲಿ ಶಾಖೆಯನ್ನು ನಡೆಸುತ್ತಿದ್ದ ಹಿನ್ನೆಲೆ ವ್ಯಕ್ತಿಯೋರ್ವನನ್ನು ಉತ್ತರ ಪ್ರದೇಶದ ಬಲ್ಲಿಯಾ ನಗರದ ಪೊಲೀಸರು ಬಂಧಿಸಿದ್ದರು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ಸ್ಥಳೀಯ ನಿವಾಸಿಗಳ ಹೆಸರಿನಲ್ಲಿ ಉಳಿತಾಯ ಹಾಗೂ ಠೇವಣಿ ಖಾತೆಗಳನ್ನು ತೆರಯುವ ಮೂಲಕ ಆಫಾಕ್ ಅಹ್ಮದ್ ಎಂಬಾತನಿಂದ ಅಧಿಕಾರಿಗಳು ಸುಮಾರು 1.37 ಲಕ್ಷ ರೂ. ಅನ್ನು ವಶಪಡಿಸಿಕೊಂಡಿದ್ದರು.