ಮುಂಬೈ, ಜು 11 (DaijiworldNews/PY): ಪೊಲೀಸ್ ಎನ್ಕೌಂಟರ್ಗೆ ಹತ್ಯೆಗೀಡಾದ ಗ್ಯಾಂಗ್ಸ್ಟರ್ ವಿಕಾಸ್ ದುಬೆ ಸಹಚರ ಹಾಗೂ ಆತನ ಕಾರು ಚಾಲಕನನ್ನು ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ಮಹಾರಾಷ್ಟ್ರದ ಥಾಣೆಯಲ್ಲಿ ಶನಿವಾರ ಬಂಧಿಸಿದೆ.
ಅರವಿಂದ್ ಅಲಿಯಾಸ್ ಗುಡ್ಡನ್ ರಾಮ್ವಿಲಾಸ್ ತ್ರಿವೇದಿ (46) ಮತ್ತು ಆತನ ಕಾರು ಚಾಲಕ ಸೋನು ತಿವಾರಿ (30) ಅವರನ್ನು ಬಂಧಿಸಲಾಗಿದೆ ಎಂದು ಎಟಿಎಸ್ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ದೇಶಮಾನೆ ತಿಳಿಸಿದ್ದಾರೆ.
ಕಾನ್ಪುರದ ಬಳಿಯ ಬಿಕ್ರು ಗ್ರಾಮದಲ್ಲಿ ಜುಲೈ 2 ಮತ್ತು ಜುಲೈ 3 ರ ಮಧ್ಯರಾತ್ರಿಯಲ್ಲಿ ವಿಕಾಸ್ ದುಬೆ ಮತ್ತು ಅವರ ಸಹಚರರು ಎಂಟು ಪೊಲೀಸರನ್ನು ಹತ್ಯೆಗೈದ ಪ್ರಕರಣದಲ್ಲಿ ತ್ರಿವೇದಿಯನ್ನು ಕಾನ್ಪುರ ಪೊಲೀಸರು ಬಂಧಿಸಲು ಪ್ರಯತ್ನಿಸಿದ್ದರು. ಆದರೆ, ಘಟನೆಯ ನಂತರ ಪರಾರಿಯಾಗಿದ್ದ ವಿಕಾಸ್ ದುಬೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದು, ಶುಕ್ರವಾರ ಮುಂಜಾನೆ ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ ನಡೆಸಿದ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದಾನೆ.
ವಿಕಾಸ್ ದುಬೆ ಅವರ ವಿರುದ್ಧ ಸುಮಾರು 60 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
2001 ರಲ್ಲಿ ಉತ್ತರ ಪ್ರದೇಶ ಸಚಿವ ಸಂತೋಷ್ ಶುಕ್ಲಾ ಅವರ ಹತ್ಯೆ ಸೇರಿದಂತೆ ತ್ರಿವೇದಿ ದುಬೆಯವರೊಂದಿಗೆ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ತ್ರಿವೇದಿ ಮತ್ತು ಆತನ ಕಾರು ಚಾಲಕನನ್ನು ಬಂಧಿಸುವಲ್ಲಿಎನ್ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ನೇತೃತ್ವದ ತಂಡವು ಯಶಸ್ವಿಯಾಗಿದೆ.