ಬೆಂಗಳೂರು, ಜು.12 (DaijiworldNews/MB) : ಕೇರಳದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾದ ಚಿನ್ನ ಕಳ್ಳ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಸ್ವಪ್ನ, ಸಂದೀಪ್ ನಾಯರ್ ಅವರನ್ನು ರಾಷ್ಟ್ರೀಯ ತನಿಖಾದಳ (ಎನ್ಐಎ) ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಶನಿವಾರ ಸಂಜೆ ಜಾಮೀನು ಆರೋಪಿ ಸ್ವಪ್ನ ಹಾಗೂ ಅವರ ಕುಟುಂಬಸ್ಥರನ್ನು ಬೆಂಗಳೂರಲ್ಲಿ ರಾಷ್ಟ್ರೀಯ ತನಿಖಾ ತಂಡ( ಎನ್ಐಎ) ಅಧಿಕಾರಿಗಳು ಬಂಧಿಸಿದ್ದು, ಆಕೆ ನೀಡಿದ ಮಾಹಿತಿಯ ಆಧಾರದಲ್ಲಿ ಮತ್ತೋರ್ವ ಆರೋಪಿ ಸಂದೀಪ್ ನಾಯರ್ನ್ನು ಕೂಡಾ ಬಂಧಿಸಿದ್ದಾರೆ. ಎಲ್ಲಾ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ದಾಖಲಿಸಲಾಗಿದೆ
ನಾಲ್ಕೈದು ದಿನಗಳಿಂದ ನಾಪತ್ತೆಯಾಗಿದ್ದ ಸ್ವಪ್ನ ಆನ್ಲೈನ್ ಮೂಲಕ ಜಾಮೀನು ಅರ್ಜಿ ಹಾಕಿದ್ದು ಅರ್ಜಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.
ಇನ್ನು ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಎನ್ಐಎ ಜಾಮೀನು ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸ್ವಪ್ನ ಪ್ರಭ ಸುರೇಶ್, ಫಾಜೀಲ್ ಫರೀದ್, ಸಂದೀಪ್ ನಾಯರ್ ಹಾಗೂ ಸರೀತ್ ಕುಮಾರ್ ಅವರ ವಿಚಾರಣೆ ಅತೀ ಮುಖ್ಯವಾಗಿದೆ. ಈ ಜಾಲದಲ್ಲಿ ಇರುವ ಮತ್ತಷ್ಟು ಮಂದಿಯ ಪತ್ತೆಯಾಗಬೇಕಿದೆ ಎಂದು ಎನ್ಐಎ ಪರ ವಕೀಲರು ವಾದಿಸಿದ್ದರು.
ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜತಾಂತ್ರಿಕ ರಕ್ಷಣೆ ಹೊಂದಿರುವ ''ಡಿಪ್ಲೊಮ್ಯಾಟಿಕ್ ಬ್ಯಾಗೇಜ್'' ನಲ್ಲಿದ್ದ 30 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶ ಪಡಿಸಿಕೊಂಡಿದ್ದು ಆರೋಪಿ ರಾಜತಾಂತ್ರಿಕ ಕಚೇರಿಯ ಮಾಜಿ ಸಿಬ್ಬಂದಿ ಸ್ವಪ್ನ ಸುರೇಶ್ ಎಂದು ಆರೋಪಿಸಲಾಗಿದೆ.