ನವದೆಹಲಿ, ಜು 12 (DaijiworldNews/PY): ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತ ಹಾಗೂ ಚೀನಾ ದೇಶಗಳು ಪ್ರಯತ್ನವನ್ನು ಮುಂದುವರೆಸಿದ್ದು, ಉಭಯ ದೇಶಗಳು ಮಾಡುತ್ತಿರುವ ಈ ಪ್ರಯತ್ನವು ಪ್ರಗತಿಯಲ್ಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈ ಶಂಕರ್ ಹೇಳಿದ್ದಾರೆ.
ಇಂಡಿಯಾ ಗ್ಲೋಬಲ್ ವೀಕ್ನಲ್ಲಿ ವೀಡಿಯೊ ಸಂವಾದಾತ್ಮಕ ಅಧಿವೇಶನದಲ್ಲಿ ಮಾತನಾಡಿದ ಅವರು, ಎರಡೂ ಕಡೆಯ ಸೈನಿಕರನ್ನು ಪರಸ್ಪರ ಹತ್ತಿರ ನಿಯೋಜಿಸಲಾಗಿರುವುದರಿಂದ ನಾವು ನಿಷ್ಕ್ರಿಯ ಮಾಡುವ ಕಾರ್ಯವನ್ನು ಒಪ್ಪಿದ್ದೇವೆ. ಈ ಬಗ್ಗೆ ಮಾತುಕತೆ ಇದೀಗ ಪ್ರಾರಂಭವಾಗಿದ್ದು, ಇದು ಪ್ರಗತಿಯಲ್ಲಿದೆ. ಈ ಸಮಯದಲ್ಲಿ, ನಾನು ಹೆಚ್ಚು ಹೇಳಲು ಬಯಸುವುದಿಲ್ಲ ಎಂದರು.
ಭಾರತ ಮತ್ತು ಚೀನಾ ಮತ್ತೊಂದು ಸುತ್ತಿನ ರಾಜತಾಂತ್ರಿಕ ಮಾತುಕತೆ ನಡೆಸಿದ ಒಂದು ದಿನದ ನಂತರ ಜೈಶಂಕರ್ ಅವರು ಈ ಹೇಳಿಕೆಯನ್ನು ಹೇಳಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಭಾನುವಾರ ಸುಮಾರು ಎರಡು ಗಂಟೆಗಳ ದೂರವಾಣಿ ಸಂಭಾಷಣೆಯ ನಂತರ ಸೋಮವಾರ ಬೆಳಿಗ್ಗೆ ಸೈನಿಕರನ್ನು ನಿಯೋಜಿಸುವ ಔಪಚಾರಿಕ ಪ್ರಕ್ರಿಯೆ ಪ್ರಾರಂಭವಾಯಿತು.
ಜೈಶಂಕರ್ ಅವರು ಜೂನ್ 17 ರಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲಾಗುವುದು ಎಂದು ಉಭಯ ದೇಶಗಳು ಒಪ್ಪಿಗೆ ಸೂಚಿಸಿದ್ದಾರೆ.