ರಾಯಚೂರು, ಜು.12 (DaijiworldNews/MB) : ತನ್ನ ಮನೆಯ ಹುಡುಗಿ ಪ್ರೀತಿಸಿ ವಿವಾಹವಾದ ಕಾರಣಕ್ಕೆ ಯುವಕನ ಕುಟುಂಬದ ಮೇಲೆ ದ್ವೇಷವಿಟ್ಟುಕೊಂಡ ಯುವತಿಯ ಕುಟುಂಬದವರು ಹಾಡುಹಗಲಿನಲ್ಲೇ ಯುವಕನ ಕುಟುಂಬದ ಐವರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಸಿಂಧನೂರಿನ ಸುಕಾಲಪೇಟೆಯಲ್ಲಿ ಶನಿವಾರ ನಡೆದಿದೆ.
ಮೃತರನ್ನು ಹುಡುಗನ ತಂದೆ ಈರಪ್ಪ (65), ತಾಯಿ ಸುಮಿತ್ರಮ್ಮ (55), ಸಹೋದರರಾದ ನಾಗರಾಜ (38), ಹನುಮೇಶ (40) ಹಾಗೂ ಸಹೋದರಿ ಶ್ರೀದೇವಿ (30) ಎಂದು ಗುರುತಿಸಲಾಗಿದೆ.
ಗಂಭೀರ ಗಾಯಗೊಂಡಿದ್ದ ತಂದೆ ಈರಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಅವರು ಕೂಡಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಸಹೋದರಿಯರಾದ ರೇವತಿ (20) ಹಾಗೂ ತಾಯಮ್ಮ (25) ಕೂಡ ಗಾಯಗೊಂಡಿದ್ದಾರೆ.
ಪರಸ್ಪರ ಪ್ರೀತಿಸುತ್ತಿದ್ದ ಮೌನೇಶ (21) ಹಾಗೂ ಮಂಜುಳಾ (18) ಎಂಬವರು ಒಂದೇ ಜಾತಿಗೆ ಸೇರಿದವರಾಗಿದ್ದು 8 ತಿಂಗಳ ಹಿಂದೆ ಗದಗನಲ್ಲಿ ಯಾರಿಗೂ ತಿಳಿಯದಂತೆ ವಿವಾಹವಾಗಿದ್ದರು. ಯುವತಿಯ ಮನೆಯವರು ಒಪ್ಪಿಕೊಂಡಿರಲಿಲ್ಲ. ಯುವತಿಯ ಮನೆಗೆ ಈ ದಂಪತಿಗಳು ಹೋಗಿದ್ದು ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಆತಂಕಕ್ಕೆ ಒಳಗಾದ ದಂಪತಿಗಳು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಈ ಕಾರಣದಿಂದ ಕೋಪಗೊಂಡ ಯುವತಿಯ ಮನೆಯವರು ಯುವಕನ ಮನೆಗೆ ಬಂದು ಗಲಾಟೆ ಮಾಡಿ ಹತ್ಯೆ ಮಾಡಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಯುವತಿಯ ಮನೆಯ ಐವರನ್ನು ಪೊಲೀಸರು ಬಂಧಿಸಿದ್ದು ಈ ಬಗ್ಗೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.