ಮುಂಬೈ, ಜು 12 (DaijiworldNews/PY): ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಹೊರಕ್ಕೆತರಲು ಭಾರತಕ್ಕೆ ಮತ್ತೊಬ್ಬ ಮನಮೋಹನ್ ಸಿಂಗ್ ಅಗತ್ಯವಿದೆ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಶಿವಸೇನೆಯ ಮುಖವಾಣಿ ಸಾಮ್ನಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಡಾ. ಮನಮೋಹನ್ ಸಿಂಗ್ ಅವರು ಕೇಂದ್ರದಲ್ಲಿ ಪಿ.ವಿ.ನರಸಿಂಹ ರಾವ್ ನೇತೃತ್ವದ ಸರ್ಕಾರದ ಸಂದರ್ಭ ಕೇಂದ್ರದ ಹಣಕಾಸು ಸಚಿವರಾಗಿದ್ದರು. ಡಾ. ಸಿಂಗ್ ನಂತರ ಭಾರತದ ಪ್ರಧಾನಿಯಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಮುಖ್ಯಸ್ಥರಾಗಿ 10 ವರ್ಷಗಳ ಕಾಲ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಆರ್ಥಿಕತೆಯನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಧಾನಿ ನರೇಂದ್ರ ಮೋದಿ ಅವರು ತಜ್ಞರನ್ನು ಸಂಪರ್ಕಿಸುವ ಅಗತ್ಯವಿದೆ. ನಾವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ ಎನ್ನುವ ವಿಚಾರ ನಮಗೆ ತಿಳಿದಿತ್ತು. ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಅವರು ದೇಶಕ್ಕೆ ಹೊಸ ನಿರ್ದೇಶನ ನೀಡಿದ್ದು, ಅವರು ಭಾರತವನ್ನು ಆರ್ಥಿಕ ಬಿಕ್ಕಟ್ಟಿನಿಂದ ಹೊರಕ್ಕೆ ತಂದಿದ್ದರು ಎಂದು ಹೇಳಿದರು.
ಡಾ.ಮನಮೋಹನ್ ಸಿಂಗ್ ಹಾಗೂ ನರಸಿಂಹ ರಾವ್ ಅವರು ಭಾರತವನ್ನು ಆರ್ಥಿಕತೆ ಬಿಕ್ಕಟ್ಟಿನಿಂದ ಹೊರಕ್ಕೆ ತಂದಿದ್ದಾರೆ. ಇದರ ಕೀರ್ತಿ ಅವರಿಬ್ಬರಿಗೆ ಸಲ್ಲಬೇಕು ಎಂದರು.
ಭಾರತಕ್ಕೆ ಮತ್ತೊಬ್ಬ ಮನಮೋಹನ್ ಸಿಂಗ್ ಅಗತ್ಯವಿದೆಯೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಶೇಕಡಾ ನೂರು ಎಂದು ಹೇಳಿದರು.