ಬೆಂಗಳೂರು, ಜು 12 (DaijiworldNews/PY): ವಾರದ ಅಂತ್ಯದ ವೇಳೆಗೆ 20,000 ಕೊರೊನಾ ವೈರಸ್ ಪರೀಕ್ಷೆಗಳನ್ನು ನಡೆಸುವ ಗುರಿ ರಾಜ್ಯ ಸರ್ಕಾರ ಹೊಂದಿದ್ದು, 20,288 ಜನರನ್ನು ಪರೀಕ್ಷಿಸುವ ಮೂಲಕ ಗುರಿಯನ್ನು ದಾಟಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಾವಿನ ಪ್ರಮಾಣ 1.69% ಆಗಿದ್ದು ಅದು ಇನ್ನೂ ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿದೆ. ಸಾವಿನ ಪ್ರಮಾಣವನ್ನು ನಿಯಂತ್ರಿಸುವಲ್ಲಿ ನಾವು ಯಶಸ್ಸು ಸಾಧಿಸಿದ್ದೇವೆ ಎಂದರು.
ಜುಲೈ 11 ರ ಶನಿವಾರದಂದು ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಒಂದು ಲಕ್ಷ ಆಂಟಿಜೆನ್ ಪರೀಕ್ಷೆಗಳನ್ನು ರಾಜ್ಯವ್ಯಾಪಿ ಮಾಡಲಾಗಿದೆ. ವರದಿಗಳು ಭಾನುವಾರ ಲಭ್ಯವಾಗಲಿವೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರವನ್ನು ಲಾಕ್ ಡೌನ್ ಮಾಡುವ ಬಗ್ಗೆ ರಾಜಧಾನಿಯ ಎಂಟು ವಲಯ ಉಸ್ತುವಾರಿ ಸಚಿವರು ಮುಖ್ಯಮಂತ್ರಿ ಯಡಿಯುರಪ್ಪ ಅವರಿಗೆ ಮನವಿ ಮಾಡಿದ್ದರು. ಅದರಂತೆ ಸಿಎಂ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ ಎಂದು ಹೇಳಿದರು.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ನಿರ್ಮೂಲನೆ ಮಾಡಲು, ನಾವು ಮೂರು ಸಿಗಳಿಂದ ದೂರವಿರಬೇಕು ಅವೆಂದರೆ, ಸೂಕ್ತ ಗಾಳಿ ಇಲ್ಲದ ಜಾಗಗಳು, ಜನದಟ್ಟಣೆ ಪ್ರದೇಶ ಮತ್ತು ನಿಕಟ ಸಂಪರ್ಕಗಳಿಂದ ದೂರವಿರಬೇಕು. ಇದಲ್ಲದೆ, ಮೂರು ಡಬ್ಲ್ಯೂಗಳು, ಆರು ಅಡಿಗಳಷ್ಟು ಅಂತರ ಕಾಯ್ದುಕೊಳ್ಳುವುದು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳುವುದು ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.
ನಾವು ಪ್ರಮುಖ ಮಾಹಿತಿಯನ್ನು ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದೇವೆ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಗೆಲ್ಲಲು ನಾವು ಏನು ಮಾಡಬೇಕೋ ಅದನ್ನು ಮಾಡಲೇಬೇಕು. ಕೊರೊನಾ ವೈರಸ್ ಅನ್ನು ನಿಯಂತ್ರಿಸಲು ಸರ್ಕಾರವು ಬೂತ್-ಮಟ್ಟದ ಸಮಿತಿಗಳನ್ನು ರಚಿಸಬೇಕಿದ್ದು, ಈ ಸಮಿತಿಗಳಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಆರ್ಎಸ್ಎಸ್, ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಆಡಳಿತದೊಂದಿಗೆ ಸಹಕರಿಸಬೇಕು ಎಂದರು.