ಬೆಂಗಳೂರು, ಜು 12 (DaijiworldNews/PY): ದುಬೈಯಲ್ಲಿ ಸಂಕಷ್ಟಕ್ಕೊಳಗಾದ ಕನ್ನಡಿಗರಿಗಾಗಿ ಎಸ್ಕೆಎಸ್ಎಸ್ಎಫ್ ಕರ್ನಾಟಕ ಯುಎಇ ಸಮಿತಿ ಏರ್ಪಡಿಸಿದ ಎರಡನೇ ಚಾರ್ಟರ್ಡ್ ವಿಮಾನ ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ಬಂದಿಳಿದಿದೆ.
ಜುಲೈ 10ರಂದು ವಿಮಾನವು ಮುಂಜಾನೆ 3.20ಕ್ಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಾಸ್ ಅಲ್ ಖೈಮಾದಿಂದ ಹೊರಟಿದ್ದು, ಶುಕ್ರವಾರ ಬೆಳಿಗ್ಗೆ 8.30ಕ್ಕೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದೆ.
ಡುವಾಬಿ, ಅಬುಧಾಬಿ ಮತ್ತು ಶಾರ್ಜಾದಲ್ಲಿ ಸಂಕಷ್ಟಕ್ಕೊಳಗಾದ 177 ಭಾರತದ ನಿವಾಸಿಗಳನ್ನು ಕರೆತಂದಿದೆ. ಸ್ಪೈಸ್ ಜೆಟ್ ವಿಮಾನದಲ್ಲಿ ಗರ್ಭಿಣಿಯರು, ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವ ರೋಗಿಗಳು, ಹಿರಿಯ ನಾಗರಿಕರು ಮತ್ತು ಯುಎಇಯಲ್ಲಿ ಭೇಟಿ ವೀಸಾದ ಕಾರಣ ಬಾಕಿಯಾದವರು ಇದ್ದರು.
ಸಮಿತಿಯು ಪ್ರಯಾಣಿಕರಿಗೆ ಯುಎಇಯ ವಿವಿಧ ಭಾಗಗಳಿಂದ ರಾಸ್ ಅಲ್ ಖೈಮಾ ವಿಮಾನ ನಿಲ್ದಾಣವನ್ನು ತಲುಪಲು ಸಾರಿಗೆ ವ್ಯವಸ್ಥೆ ಮಾಡಿತ್ತು. ವಿಮಾನ ನಿಲ್ದಾಣದಲ್ಲಿ ಪ್ರವೇಶ ಮತ್ತು ಬೋರ್ಡಿಂಗ್ ಕಾರ್ಯಾಚರಣೆಯ ಸಮಯದಲ್ಲಿ ವಿಖಯಾ ತಂಡದ ಸದಸ್ಯರು ಸ್ವಯಂಸೇವಕರಾಗಿ ಸಹಾಯ ಮಾಡಿದರು.
ಪ್ರಯಾಣಿಕರ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಬೆಂಗಳೂರಿನಿಂದ ಮಂಗಳೂರಿಗೆ ಸಾರಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಸಮಿತಿಯ ಮುಖ್ಯ ಕಾರ್ಯದರ್ಶಿ ಸುಲೈಮಾನ್ ಮೌಲ್ವಿ ಕಲ್ಲೇಗಾ, ಉಪಾಧ್ಯಕ್ಷ ಶೆರಿಫ್ ಕಾವು ಮತ್ತು ವಿಖಾಯಾ ಅಧ್ಯಕ್ಷ ನವಾಜ್ ಬಿ.ಸಿ ರಸ್ತೆ ಹೇಳಿದ್ದಾರೆ.