ಗುರುಗ್ರಾಮ್, ಜು 12 (DaijiworldNews/PY): ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಯಶಸ್ವಿ ಹೋರಾಟವನ್ನು ಇಡೀ ಜಗತ್ತು ಮೆಚ್ಚುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ.
ಕಡರ್ಪುರ ಗ್ರಾಮದಲ್ಲಿರುವ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಮೆಗಾ ಟ್ರೀ ಪ್ಲಾಂಟೇಶನ್ ಡ್ರೈವ್ ಕುರಿತು ಮಾತನಾಡಿದ ಗೃಹ ಸಚಿವರು, ಕೊರೊನಾ ವಿರುದ್ಧದ ಯುದ್ಧದಲ್ಲಿ ಭದ್ರತಾ ಪಡೆಗಳ ಕೊಡುಗೆಯನ್ನು ಶ್ಲಾಘಿಸಿದರು.
ಭಾರತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಭಾರತದಂತಹ ದೇಶವು ಕೊರೊನಾದ ವಿರುದ್ದ ಹೇಗೆ ಹೋರಾಡುತ್ತದೆ ಎಂದು ಎಲ್ಲರೂ ಯೋಚಿಸಿದ್ದರು, ಆತಂಕಗಳು ಇದ್ದವು ಆದರೆ ಇಂದು ಇಡೀ ವಿಶ್ವವು ಕೊರೊನಾ ವಿರುದ್ಧದ ಹೇಗೆ ಹೋರಾಡಿದೆ ಎನ್ನುವುದು ತಿಳಿಯುತ್ತದೆ ಎಂದು ಹೇಳಿದರು.
ಕೊರೊನಾ ವಿರುದ್ಧದ ಭಾರತದ ಹೋರಾಟದಲ್ಲಿ, ನಮ್ಮ ಎಲ್ಲ ಭದ್ರತಾ ಪಡೆಗಳು ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಅದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಇಂದು, ನಾನು ಈ ಕೊರೊನಾ ಯೋಧರಿಗೆ ನಮಸ್ಕರಿಸುತ್ತೇನೆ. ಭಯೋತ್ಪಾದನೆಯ ವಿರುದ್ಧ ಹೋರಾಡುವುದು ಅವರಿಗೆ ಮಾತ್ರವಲ್ಲ, ಜನರ ಸಹಾಯದಿಂದ ಕೊರೊನಾ ವಿರುದ್ಧವೂ ಸಹ ಅವರಿಗೆ ತಿಳಿದಿದೆ ಎಂದು ಅವರು ಸಾಬೀತುಪಡಿಸಿದ್ದಾರೆ ಎಂದರು.
ಕೊರೊನಾ ಬಿಕ್ಕಟ್ಟಿನ ಹಂತದಲ್ಲಿ ಅನೇಕ ಯೋಧರು ತಮ್ಮ ಪ್ರಾಣವನ್ನು ತ್ಯಜಿಸಿದ್ದಾರೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.
ನಾನು ಆ ಯೋಧರ ಕುಟುಂಬಗಳೊಂದಿಗೆ ಮಾತನಾಡಿದ್ದೇನೆ ಮತ್ತು ಇಂದು ಮತ್ತೊಮ್ಮೆ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ನಿಮ್ಮ ತ್ಯಾಗ ವ್ಯರ್ಥವಾಗುವುದಿಲ್ಲ. ಕೊರೊನಾ ವಿರುದ್ಧದ ಮಾನವ ಜನಾಂಗದ ಹೋರಾಟದ ಇತಿಹಾಸವನ್ನು ಬರೆದಾಗಲೆಲ್ಲಾ, ಭಾರತದ ಭದ್ರತಾ ಪಡೆಗಳ ಕೊಡುಗೆಯನ್ನು ಸುವರ್ಣಾಕ್ಷರದಲ್ಲಿ ಉಲ್ಲೇಖಿಸಲಾಗುತ್ತದೆ ಎಂದು ತಿಳಿಸಿದರು.
ಒಟ್ಟಾಗಿ ಸಿಎಪಿಎಫ್ಗಳು ಇಂದು ದೇಶಾದ್ಯಂತ ಸುಮಾರು 10 ಲಕ್ಷ ಮರದ ಸಸಿಗಳನ್ನು ನೆಡುವ ಅಭಿಯಾನವನ್ನು ಹಮ್ಮಿಕೊಂಡಿದ್ದರು.