ಬೆಂಗಳೂರು, ಜು13 (Daijiworld News/MSP): " ನನಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಯಾವುದೇ ತೊಂದರೆಗಳಿಲ್ಲ. ಶೀಘ್ರ ಗುಣಮುಖರಾಗುವ ಭರವಸೆ ಇದೆ" ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ಸೋಂಕು ತಗುಲಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಚಿವ ಸಿ.ಟಿ. ರವಿ, ಥರ್ಡ್ ಅಂಪೈರ್ ಫಲಿತಾಂಶದಲ್ಲಿ ನನಗೆ ಕೋವಿಡ್ ಪಾಸಿಟಿವ್ ಇದೆ ಎಂಬುದು ದೃಢವಾಗಿದೆ. ಆದರೆ ಯಾವುದೇ ತೊಂದರೆಗಳ ಲಕ್ಷಣಗಳಿಲ್ಲದೆ ನಾನು ಸಹಜವಾಗಿದ್ದೇನೆ. ಸೂಕ್ತ ಚಿಕಿತ್ಸೆಗಳನ್ನು ಪಡೆಯುತ್ತಾ ನಾನು ಇಲ್ಲಿಂದಲೇ ಕೆಲಸ ಮುಂದುವರಿಸುಲಿದ್ದು ಆದಷ್ಟು ಬೇಗ ಗುಣಮುಖನಾಗಿ ನಿಮ್ಮೆಲ್ಲರೊಂದಿಗೆ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ಈ ಹಿಂದೆ ಟ್ವೀಟ್ ಮಾಡಿದ್ದ ಸಚಿವರು, " ಒಂದು ವಾರದೊಳಗಿನ ಎರಡು ಟೆಸ್ಟ್ ನಲ್ಲಿ ಒಮ್ಮೆ ನೆಗೆಟಿವ್, ಒಮ್ಮೆ ಪಾಸಿಟಿವ್ ಬಂದಿದೆ. ಅದಕ್ಕಾಗಿ ನಾನು 3ನೇ ಟೆಸ್ಟ್ ಮಾಡಿಸಿದ್ದೇನೆ. ಥರ್ಡ್ ಅಂಪೈರ್ ರಿಸಲ್ಟ್ ಗಾಗಿ ಕಾಯುತ್ತಿದ್ದೇನೆ " ಎಂದು ಹೇಳಿದ್ದರು.
ಇನ್ನು ಇದೇ ವೇಳೆ, ಮತ್ತೊಂದು ಟ್ವೀಟ್ ಮಾಡಿರುವ ಅವರು "ನಿನ್ನೆ ನಾನು, ಮಡದಿ ಪಲ್ಲವಿ, ನನ್ನ ಸಿಬ್ಬಂದಿ ವರ್ಗ ಕೋವಿಡ್19 ಪರೀಕ್ಷೆಗೆ ಒಳಪಟ್ಟಿದ್ದೆವು. ಪಲ್ಲವಿ ಹಾಗೂ ನನ್ನ ಗನ್-ಮ್ಯಾನ್, ಚಾಲಕ ಸೇರಿ ಆಫೀಸ್ ಸಿಬ್ಬಂದಿ ಎಲ್ಲರದು ನೆಗೆಟಿವ್ ಬಂದಿದೆ" ಎಂದು ಸ್ಪಷ್ಟಪಡಿಸಿದ್ದಾರೆ.