ನವದೆಹಲಿ, ಜು13 (Daijiworld News/MSP): ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಮುಸುಕಿನ ಗುದ್ದಾಟ ತಾರಕ್ಕೇರಿದ್ದು, ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಘಟಕ ಇಬ್ಬಾಗವಾಗುವ ಸ್ಥಿತಿ ತಲುಪಿದ್ದು ಸರಕಾರದ ಪತನಕ್ಕೂ ಕಾರಣವಾಗುವ ಸಾಧ್ಯತೆ ಇದೆ.
ಈಗಾಗಲೇ ದಿಢೀರ್ ಬೆಳವಣಿಗೆಯಲ್ಲಿ ಭಾನುವಾರದಿಂದ ದೆಹಲಿಯಲಿ ಬೀಡು ಬಿಟ್ಟಿರುವ ಸಚಿನ್ ಪೈಲೆಟ್ ಜೊತೆ 42 ಶಾಸಕರು ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಭೆ ಕರೆದಿದ್ದು, ಪಕ್ಷದ ಎಲ್ಲಾ ಶಾಸಕರು ಪಾಲ್ಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಇದೆಲ್ಲದ ನಡುವೆ ರಾಜಸ್ಥಾನದ ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಯುವ ಮುಖಂಡ ಸಚಿನ್ ಪೈಲೆಟ್ ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಲಿದ್ದು, ಕಾಂಗ್ರೆಸ್ ಗೆ ವಿದಾಯ ಹೇಳುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಹೀಗಾಗಿ ಎಲ್ಲಾ ರಾಜಕೀಯ ಮುಖಂಡರ ದೃಷ್ಟಿ ರಾಜಸ್ಥಾನದ ರಾಜಕೀಯ ಬೆಳವಣಿಗೆಗಳ ಮೇಲೆ ನೆಟ್ಟಿದೆ.
2018ರಲ್ಲಿ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದ ಜೊತೆಗೆ ಅಧಿಕಾರದ ಗದ್ದುಗೆಗೆ ಏರಿತ್ತು. ಕಾಂಗ್ರೆಸ್ ಯುವ ನಾಯಕ ಸಚಿನ್ ಪೈಲಟ್ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಅನುಭವಿ ಅಶೋಕ್ ಗೆಹ್ಲೋಟ್ ಅವರಿಗೆ ಸಿಎಂ ಸ್ಥಾನ ನೀಡಿತ್ತು. ಅಂದಿನಿಂದಲೇ ಸಚಿನ್ ಪೈಲಟ್ ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ.