ಸೂರತ್, ಜು.13 (DaijiworldNews/MB) : ಕೊರೊನಾ ಕರ್ಫ್ಯೂ ನಡುವೆ ಬುಧವಾರ ಸೂರತ್ನಲ್ಲಿ ಮಾಸ್ಕ್ ಧರಿಸದೆಯೇ ಗುಜರಾತ್ ಶಾಸಕರ ಪುತ್ರ ಮತ್ತು ಅವರ ಇಬ್ಬರು ಸ್ನೇಹಿತರು ಹೋಗುತ್ತಿದ್ದಾಗ ಅವರನ್ನು ನಿಲ್ಲಿಸಿದ್ದಕ್ಕಾಗಿ ಮಹಿಳಾ ಕಾನ್ಸ್ಟೇಬಲ್ ವರ್ಗಾವಣೆ ಮಾಡಲಾಗಿದ್ದು ಇದರಿಂದಾಗಿ ಭಾರೀ ವಿವಾದ ಉಂಟಾಗಿದೆ.
ಪೊಲೀಸ್ ಕಾನ್ಸ್ಟೇಬಲ್ ಹಾಗೂ ಶಾಸಕರ ಪುತ್ರನ ನಡುವೆ ನಡೆದ ವಾಗ್ವಾದದ ವಿಡಿಯೋ ಈಗ ವೈರಲ್ ಆಗಿದ್ದು ಇದರ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಕರ್ಫ್ಯೂ ಸಮಯದಲ್ಲಿ ಮಾಸ್ಕ್ ಧರಿಸದೆಯೇ ಹೊರಗಿದ್ದ ವರಾಚಾ ರಸ್ತೆ ಶಾಸಕ ಮತ್ತು ಆರೋಗ್ಯ ಸಚಿವ ಕುಮಾರ್ ಕನನಿ ಅವರ ಪುತ್ರ ಪ್ರಕಾಶ್ ಕನನಿ ಮತ್ತು ಅವರ ಸ್ನೇಹಿತರು ಕಾನ್ಸ್ಟೇಬಲ್ ಸುನಿತಾ ಯಾದವ್ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ.
ವರದಿಗಳ ಪ್ರಕಾರ, ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಶಾಸಕರ ಸ್ನೇಹಿತರನ್ನು ತಡೆದಿದ್ದು ಬಳಿಕ ಅವರು ತಮ್ಮ ತಂದೆಯ ಕಾರಿನಲ್ಲಿ ಸ್ಥಳಕ್ಕೆ ಬಂದರು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಆಡಿಯೋದಲ್ಲಿ "ನಿಮ್ಮನ್ನು 365 ದಿನಗಳವರೆಗೆ ಒಂದೇ ಸ್ಥಳದಲ್ಲಿ ನಿಲ್ಲುವಂತೆ ಮಾಡುತ್ತೇವೆ"ಎಂದು ಶಾಸಕರ ಪುತ್ರ ಬೆದರಿಕೆ ಹಾಕಿದ್ದಾರೆ. ಆ ಸಂದರ್ಭದಲ್ಲಿ ಕಾನ್ಸ್ಟೇಬಲ್ ನಾನು ನಿಮ್ಮ ಗುಲಾಮರಲ್ಲ ಎಂದು ಜೋರಾಗಿಯೇ ಉತ್ತರಿಸಿದ್ದಾರೆ.
ಈ ಘಟನೆಯ ಬಳಿಕ ಕಾನ್ಸ್ಟೇಬಲ್ನ್ನು ಪೊಲೀಸ್ ಪ್ರಧಾನ ಕಚೇರಿಗೆ ವರ್ಗಾಯಿಸಲಾಯಿತು. ಆದರೆ ಬಳಿಕ ಕಾನ್ಸ್ಟೇಬಲ್ ಸುನಿತಾ ಯಾದವ್ ಅನಾರೋಗ್ಯದ ರಜೆಯಲ್ಲಿ ಇದ್ದಾರೆ. ಈ ಘಟನೆಯ ಬಗ್ಗೆ ಈವರೆಗೆ ಅವರು ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಭಾನುವಾರ ಶಾಸಕರ ಪುತ್ರ ಪ್ರಕಾಶ್ ಕನನಿ (37) ಮತ್ತು ಅವರ ಇಬ್ಬರು ಸ್ನೇಹಿತರಾದ ಜೀವ್ರಾಜ್ ಗೋಧಾನಿ (41) ಹಾಗೂ ಸಂಜಯ್ ಕಾಕಡಿಯ (42) ಬಂಧಿಸಲಾಗಿದ್ದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಇನ್ನು ಈ ಘಟನೆಯ ಬಗ್ಗೆ ತನಿಖೆಗೆ ಸೂರತ್ ಪೊಲೀಸ್ ಆಯುಕ್ತ ಆರ್.ಬಿ.ಬ್ರಹ್ಮಭಟ್ ಶನಿವಾರ ಆದೇಶಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಶಾಸಕ ಕನನಿ ಅವರು ತನ್ನ ಮಗ ಅವನ ಸ್ನೇಹಿತನೊಟ್ಟಿಗೆ ಸಿವಿಲ್ ಆಸ್ಪತ್ರೆಗೆ ತೆರಳುತ್ತಿದ್ದ. ಅಲ್ಲಿ ಅವನ ಮಾವನಿಗೆ ಕರೊನಾ ಟ್ರೀಟ್ಮೆಂಟ್ ನೀಡಲಾಗುತ್ತಿದೆ. ಅವರ ಸ್ಥಿತಿ ಗಂಭೀರವಾಗಿತ್ತು. ಹಾಗಾಗಿ ಅರ್ಜೆಂಟ್ನಲ್ಲಿ ತೆರಳುತ್ತಿದ್ದ. ನನ್ನದೇ ವಾಹನದಲ್ಲಿ ಹೋಗುತ್ತಿದ್ದ. ಕಾರಿನ ಮೇಲೆ ಎಂಎಲ್ಎ ಎಂದು ಬರೆದುಕೊಂಡಿದ್ದರೂ ಪೊಲೀಸ್ ಪೇದೆ ಯಾಕೆ ತಡೆಯಬೇಕಿತ್ತು. ನನ್ನ ಮಗ ಏನು ಹೇಳುತ್ತಿದ್ದಾರೆ ಎಂಬುದನ್ನು ತಾಳ್ಮೆಯಿಂದ ಕೇಳಬೇಕಿತ್ತು ಎಂದು ಹೇಳಿದ್ದಾರೆ.