ನವದೆಹಲಿ, ಜು13 (Daijiworld News/MSP): ದೇಶದ ಅತ್ಯಂತ ಶ್ರೀಮಂತ ದೇವಸ್ಥಾನಗಳ ಪೈಕಿ ಒಂದಾಗಿರುವ ಕೇರಳದ ಐತಿಹಾಸಿಕ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ ತಿರುವಾಂಕೂರು ರಾಜ ಮನೆತನದ ಸುಪರ್ದಿಗೆ ಸೇರಿದ್ದಾಗಿದೆ ಎಂದು ಸುಪ್ರೀಂಕೋರ್ಟ್ ಸೋಮವಾರದಂದು ಮಹತ್ವದ ತೀರ್ಪು ನೀಡಿದೆ.
ನಿಧಿ ಕೋಣೆಗಳು ಉಳ್ಳ ನೆಲಮಾಳಿಗೆ ಸಂಪತ್ತು, ದೇಗುಲದ ಆಸ್ತಿ ಹಕ್ಕು ವಿವಾದದಿಂದ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ ಇಡೀ ದೇಶದ ಗಮನ ಸೆಳೆದ ಪ್ರಕರಣವಾಗಿತ್ತು. ಸುಮಾರು 150 ವರ್ಷಗಳಿಂದ ರಹಸ್ಯವಾಗಿದ್ದ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ ಸಂಪತ್ತಿನ ಮೌಲ್ಯ ಸುಮಾರು 1.5 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ದೇಗುಲದ ರಹಸ್ಯ ಹೊರ ತೆಗೆಯಲು ಕಾರಣಕರ್ತರಾಗಿದ್ದ ಅರ್ಜಿದಾರ ಸುಂದರರಾಜನ್ ಮೃತಪಟ್ಟಿದ್ದಾರೆ.
ದೇವಸ್ಥಾನ ಸಾರ್ವಜನಿಕ ಸಂಪತ್ತಾಗಿದ್ದರೂ ತಿರುವಾಂಕೂರು ರಾಜ ಕುಟುಂಬ ಇದನ್ನು ಸ್ವಂತ ಸ್ವತ್ತು ಎಂದೇ ಭಾವಿಸಿದೆ. ದೇವಸ್ಥಾನದ ಆಡಳಿತದಲ್ಲಿ ರಾಜಕುಟುಂಬದ ಹಸ್ತಕ್ಷೇಪವನ್ನು ತಡೆಯಬೇಕು. ಮಾಜಿ ಮಹಾಲೇಖಪಾಲರಾದ ವಿನೋದ್ ರಾಯ್ ಅವರಿಂದ ವಿಸ್ತಾರ ಆಡಿಟ್ ನಡೆಸಬೇಕು ಎಂದು 500 ಪುಟಗಳ ಸುದೀರ್ಘ ವರದಿಯಲ್ಲಿ ಅಮಿಕಸ್ ಕ್ಯೂರಿ ಗೋಪಾಲ ಸುಬ್ರಮಣ್ಯಂ ಕೋರ್ಟ್ ಗಮನ ಸೆಳೆದಿದ್ದರು.
ನ್ಯಾಯಮೂರ್ತಿಗಳಾದ ಸೋಮವಾರ ಮಲ್ಹೋತ್ರಾ ಮತ್ತು ಯುಯು ಲಲಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ತೀರ್ಪನ್ನು ಪ್ರಕಟಿಸಿದ್ದು ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಆಡಳಿತಾತ್ಮಕ ಸಮಿತಿ ದೇವಸ್ಥಾನದ ಆಡಳಿತ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ ಎಂದು ಹೇಳಿದೆ.