ಬೆಂಗಳೂರು, ಜು13 (Daijiworld News/MSP): ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಟಮಿನ್ ಸಿ ಔಷಧಿ ಹಾಗೂ ಆಯುಷ್ ಸಚಿವಾಲಯ ದೃಢೀಕರಿಸಿದ ರೋಗ ನಿರೋಧಕ ಶಕ್ತಿ ವರ್ಧಕ ಕಿಟ್ (Immunity Booster) ಮತ್ತು ಸ್ಯಾನಿಟೈಸರ್ ಪ್ರತಿ ಮನೆ ಮನೆಗೂ ಸರ್ಕಾರ ಒದಗಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸೋಮವಾರ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಈ ಆರೋಗ್ಯ ಕಿಟ್ಗಳು ಪ್ರತಿ ಮೆಡಿಕಲ್ ಹಾಗೂ ಇತರ ಅಂಗಡಿಗಳಲ್ಲಿ ಮಾರಾಟಕ್ಕೂ ದೊರೆಯಲಿ. ಇದಲ್ಲದೆ ರೋಗ ಲಕ್ಷಣ ಕಂಡು ಬಂದವರಿಗೂ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಔಷಧಿಗಳನ್ನು ಪೂರೈಸಬೇಕು. ಆಗ ಮಾತ್ರ ಕರ್ನಾಟಕ ಕೊರೊನಾ ನಿಯಂತ್ರಣ ಮಾಡಲು ಸಾಧ್ಯ ಎಂದಿದ್ದಾರೆ.
ಎಲ್ಲರಿಗೂ ಆರೋಗ್ಯ ಕಿಟ್ ನೀಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಕನಿಷ್ಠ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಆರೋಗ್ಯ ಕಿಟ್ ನೀಡಲು ಸರ್ಕಾರ ತಕ್ಷಣವೇ ನಿರ್ಧಾರ ತೆಗೆದುಕೊಳ್ಳಬೇಕು. ಇದರ ಜೊತೆಗೆ ಕೇಂದ್ರ ಸರ್ಕಾರ ಈ ಸೋಂಕು ತಡೆಗೆ ಬಳಸಬಹುದಾದ ಯೋಗ್ಯ ಔಷಧಿಗಳ (supplements) ಪಟ್ಟಿ ಒದಗಿಸಿ ಅದನ್ನು ಸಾರ್ವಜನಿಕರು ವ್ಯಾಪಕವಾಗಿ ಬಳಸುವಂತೆ ಸಾಮೂಹಿಕ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯ ಎಂದು ಅವರು ತಿಳಿಸಿದ್ದಾರೆ.
ಸರ್ಕಾರ ದಿನಕೊಂದು ನಿರ್ಧಾರ ತೆಗೆದುಕೊಳ್ಳುವ ಮೂಲಕ ಕೊರೊನಾ ವೈರಸ್ ತಡೆಯುವಲ್ಲಿ ಎಡವುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇನ್ನಾದರೂ ಜವಾಬ್ದಾರಿಯಿಂದ, ದೂರದೃಷ್ಟಿಯಿಂದ ಸರ್ಕಾರ ಕಾರ್ಯ ಸಾಧುವಾದ ಯೋಜನೆಗಳನ್ನು ಜಾರಿಗೊಳಿಸಲು ತಕ್ಷಣ ಕಾರ್ಯೋನ್ಮುಖರಾಗುವಂತೆ ಆಗ್ರಹಿಸುತ್ತೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ಅವರು ಟ್ವಟಿರ್ನಲ್ಲಿ ರಾಜ್ಯ ಸರ್ಕಾರಕ್ಕೆ ಸರಣಿ ಟ್ವೀ ಟ್ ಮಾಡುವ ಮೂಲಕ ಎಚ್ಚರಿಸಿದ್ದಾರೆ.