ಬೆಂಗಳೂರು, ಜು.13 (DaijiworldNews/MB) : ಕೊರೊನಾ ಸೋಂಕು ಮತ್ತಷ್ಟು ಹೆಚ್ಚಾಗುತ್ತಿರುವ ಕಾರಣದಿಂದಾಗಿ ಜುಲೈ 16 ರಿಂದ 27ರವರೆಗೆ ನಿಗಧಿಯಾಗಿದ್ದ ಪ್ರಥಮ ಪಿಯುಸಿ ಪೂರಕ ಪರೀಕ್ಷೆಗಳನ್ನು ರದ್ದುಮಾಡಲಾಗಿದೆ ಎಂದು ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಹಿಂದೆ ಈ ಪರೀಕ್ಷೆಯನ್ನು ಮುಗಿಸಿ ಜುಲೈ 30 ರಂದು ಫಲಿತಾಂಶವನ್ನು ಪ್ರಕಟಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಕಾರಣದಿಂದ ಈ ಪರೀಕ್ಷೆಯನ್ನು ರದ್ದು ಮಾಡಲಾಗಿದ್ದು ಅನುತ್ತೀರ್ಣಗೊಂಡ ವಿದ್ಯಾರ್ಥಿಗಳನ್ನು ದ್ವಿತೀಯ ಪಿಯುಸಿಗೆ ತೇರ್ಗಡೆಗೊಳಿಸಲಾಗುತ್ತದೆ. ಆದರೆ ಹಾಜರಾತಿಯ ಕೊರತೆಯಿಂದ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಅನುಮತಿ ಪಡೆಯದ ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣಗೊಳ್ಳುವರು ಎಂದು ಹೇಳಿದ್ದಾರೆ.
ಹಾಗೆಯೇ ಮಕ್ಕಳು ಮನೆಯಲ್ಲಿದ್ದರೂ ಕೂಡಾ ಕಲಿಕೆಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ದೂರದರ್ಶನ ಚಂದನ ವಾಹಿನಿಯಲ್ಲಿ 8 ರಿಂದ 10ನೇ ತರಗತಿಯ ಮಕ್ಕಳಿಗೆ 20 ದಿನಗಳ ಕಾಲ ಸೇತುಬಂಧ (Bridge Course) ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುವುದು ಎಂದು ಕೂಡಾ ತಿಳಿಸಿದ್ದಾರೆ.