ಬೆಂಗಳೂರು, ಜು. 13 (DaijiworldNews/SM): ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಪ್ರದೇಶಗಳು ಲಾಕ್ ಡೌನ್ ಮಾಡಲಾಗಿದೆ. ಮಂಗಳವಾರ ರಾತ್ರಿ 8 ಗಂಟೆಯಿಂದ ಜುಲೈ 22ರ ಬೆಳಗ್ಗೆ 5 ಗಂಟೆಯವರೆಗೆ ಬೆಂಗಳೂರು ಲಾಕ್ ಆಗಿರಲಿದೆ. ಈ ಅವಧಿಯಲ್ಲಿ ಬಹುತೇಕ ಎಲ್ಲವೂ ಬಂದ್ ಆಗಿರಲಿದೆ.
ಏನೇನು ಇರುತ್ತೆ?
ಜುಲೈ 22ರ ಬೆಳಗ್ಗೆ 5 ಗಂಟೆಯವರೆಗೆ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಕಂಟೈನ್ ಮೆಂಟ್ ಅಲ್ಲದ ವಲಯಗಳಲ್ಲಿ ಸರ್ಕಾರಿ ಕಚೇರಿಗಳು, ಆರೋಗ್ಯ, ವಿದ್ಯುತ್ , ನೀರು, ವೈದ್ಯಕೀಯ ಶಿಕ್ಷಣ, ಪೊಲೀಸ್, ಸೇರಿದಂತೆ ತುರ್ತು ಸೇವೆಗಳಿಗೆ ನಿರ್ಬಂಧ ಇರುವುದಿಲ್ಲ.
ಬೆಂಗಳೂರಿನ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿರುವ ಕಚೇರಿಗಳಲ್ಲಿ ಶೇ.50 ರಷ್ಟು ಸಿಬ್ಬಂದಿ ಕಾರ್ಯನಿರ್ವಹಿಸಬಹುದಾಗಿದೆ. ಕೋವಿಡ್-19 ಸಂಬಂಧಿಸಿದ ಕಾರ್ಯಾಚರಣೆಗಳಿಗಾಗಿ ನಿಯೋಜಿಸಿರುವ ಸರ್ಕಾರೇತರ ಸಂಸ್ಥೆಗಳು, ಸ್ವಯಂ ಸೇವಕರು ಹಾಗೂ ಇತರೆ ಎಲ್ಲ ಕಚೇರಿಗಳ ಸಿಬ್ಬಂದಿ ಮನೆಯಿಂದಲೇ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸುವಂತೆ ತಿಳಿಸಲಾಗಿದೆ. ರಕ್ಷಣೆ, ಸಶಸ್ತ್ರ, ಪೊಲೀಸ್ ಪಡೆ, ದೂರ ಸಂಪರ್ಕ ಸೇವೆ ಸೇರಿ ಅಗತ್ಯ ಸೇವೆಗಳನ್ನು ನಿರ್ವಹಿಸುವ ಕಚೇರಿಗಳು ತೆರೆದಿರುತ್ತವೆ. ಅಂಚೆ ಕಚೇರಿಗಳು, ಬ್ಯಾಂಕ್ ಗಳು, ವೇತನ, ಲೆಕ್ಕಪತ್ರ, ಹಣಕಾಸು ಸಲಹೆಗಾರರು ಹಾಗೂ ಮಹಾ ಲೆಕ್ಕ ನಿಯಂತ್ರಕರ ಕಚೇರಿಗಳು ಕನಿಷ್ಠ ಸಿಬ್ಬಂದಿಯೊಂದಿಗೆ ಸೇವೆ ಲಭ್ಯವಿರಲಿದೆ. ಎಲ್ಲಾ ಆರೋಗ್ಯ ಸೇವೆಗಳು, ಎಲ್ಲ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಎಲ್ಲ ಮಂಡಿ, ತರಕಾರಿ ಮತ್ತು ಹಣ್ಣು ಮಾರುಕಟ್ಟೆಗಳು, ಕೃಷಿ ಯಂತ್ರೋಪಕರಣ ಮಳಿಗೆ, ಕೀಟನಾಶಕ, ಬೀಜ ತಯಾರಿಕೆ, ವಿತರಣೆ ಮಳಿಗೆಗಳು ತೆರೆದಿರುತ್ತವೆ. ಮೀನುಗಾರಿಕೆ ಚಟುವಟಿಕೆಗಳು, ಮೊಟ್ಟೆ ಕೇಂದ್ರಗಳು, ಕೋಳಿ, ಜಾನುವಾರ ಸಾಗಣೆ, ಹಾಲು ಮತ್ತು ಹಾಲಿನ ಉತ್ಪನ್ನಗಳ ಸಂಸ್ಕರಣೆ, ವಿತರಣೆ ಹಾಗೂ ಮಾರಾಟಕ್ಕೆ ಅವಕಾಶ ಇರಲಿದೆ.
ರಾಜ್ಯ ಸರ್ಕಾರದ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮ ಮುಂತಾದವುಗಳು ತೆರೆಯಲು ಅವಕಾಶವಿಲ್ಲ. ಕೇಂದ್ರ ಸರ್ಕಾರದ ಕಚೇರಿಗಳು, ಅದರ ಸ್ವಾಯತ್ತ ಅಧೀನ ಕಚೇರಿಗಳು ಹಾಗೂ ಸಾರ್ವಜನಿಕ ಸಂಸ್ಥೆಗಳು ತೆರೆದಿರುವುದಿಲ್ಲ. ಮಾಲ್ ಗಳು, ಮದ್ಯದಂಗಡಿಗಳು ಬಂದ್ ಆಗಿರಲಿವೆ. ಸಿನಿಮಾ ಮಂದಿರಗಳು ತೆರೆಯಲು ಅವಕಾಶವಿಲ್ಲ.