ತಿರುವನಂತಪುರ, ಜು.14 (DaijiworldNews/MB) : ಕೇರಳದ ಚಿನ್ನ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡುವ ಗುರಿಯನ್ನು ಹೊಂದಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಿಳಿಸಿದೆ.
ಹಾಗೆಯೇ ಈ ತಂಡವು ಚಿನ್ನ ಸ್ಮಗ್ಲಿಂಗ್ ಮಾಡಲು ಯುಎಇ ದೂತಾವಾಸದ ನಕಲಿ ದಾಖಲೆಗಳನ್ನು ಬಳಸಿದೆ ಎಂದು ಕೂಡಾ ಎನ್ಐಎ ಮಾಹಿತಿ ನೀಡಿದೆ.
ಕೇರಳದಲ್ಲಿ ಭಾರೀ ಕೋಲಾಹಲ ಮೂಡಿಸಿದ ಈ ಚಿನ್ನ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿ ಸ್ವಪ್ನಾ ಸುರೇಶ್, ಸಂದೀಪ್ ನಾಯರ್, ಫೈಜಲ್ ಫರೀದ್, ಕೆ.ಟಿ.ರಮೀಜ್ನ್ನು ಬಂಧಿಸಲಾಗಿದೆ. ಸ್ವಪ್ನ ಹಾಗೂ ಸಂದೀಪ್ ನೀಡಿದ ಮಾಹಿತಿಯಂತೆ ಯುಎಇ ದೂತಾವಾಸ ಕಚೇರಿಯ ಮಾಜಿ ಉದ್ಯೋಗಿಯೊಬ್ಬರ ವಿಚಾರಣಗೆ ಅನುಮತಿ ಕೋರಿ ಕೊಚ್ಚಿಯಲ್ಲಿರುವ ಎನ್ಐಎ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.
ಈ ಆರೋಪಿಗಳು ಚಿನ್ನ ಅಕ್ರಮ ಸಾಗಾಟಕ್ಕಾಗಿ ಯುಎಇ ದೂತಾವಾಸ ಕಚೇರಿಯ ನಕಲಿ ಲಾಂಛನ ಮತ್ತು ಸೀಲ್ಗಳನ್ನು ಬಳಸಿದ್ದರು. ದೂತವಾಸ ಕಚೇರಿ ಅಧಿಕಾರಿಗಳಿಗೆ ತಿಳಿಯದಂತೆ ಈ ಕೃತ್ಯ ನಡೆಸಿರಬಹುದು ಎಂದು ಎಎನ್ಐ ನ್ಯಾಯಾಲಯಕ್ಕೆ ಹೇಳಿದೆ.
ಇನ್ನು ಈ ಪ್ರಕರಣದ ಆರೋಪಿಗಳೊಂದಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ ನಂಟು ಹೊಂದಿದ್ದರು ಎಂಬ ಆರೋಪ ವ್ಯಕ್ತವಾಗಿದ್ದು ಅವರನ್ನು ವಜಾ ಮಾಡಲಾಗಿದೆ.