ನವದೆಹಲಿ, ಜು 15 (Daijiworld News/MSP): ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಶಾಲಾ ಮಕ್ಕಳು ವಿದ್ಯಾಭ್ಯಾಸದಿಂದಾಗಿ ವಂಚಿತರಾಗಬಾರದು ಹೀಗಾಗಿ ಆನ್ಲೈನ್ ತರಗತಿ ನಡೆಸುವುದು ಅನಿವಾರ್ಯವಾಗಿರುವ ಕಾರಣ ಶಾಲೆಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಂಗಳವಾರ ಕೇಂದ್ರ ಮಾನವ ಸಂಪದಭಿವೃದ್ಧಿ ಸಚಿವಾಲಯ ಮಾರ್ಗಸೂಚಿ ಹೊರಡಿಸಿದೆ.
ಕೊವೀಡ್ ನಿಂದ ಆನ್ಲೈನ್ ತರಗತಿಗಳ ಅನಿವಾರ್ಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದಕ್ಕಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಡಿಜಿಟಲ್ ಶಿಕ್ಷಣಕಾಗಿ ನೂತನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಮಕ್ಕಳು ದೀರ್ಘ ಸಮಯ ಸ್ಕ್ರೀನ್ ಮುಂದೆ ಕೂರಬೇಕಾಗುತ್ತದೆ ಎಂಬ ಆಕ್ಷೇಪದ ಹಿನ್ನೆಲೆಯಲ್ಲಿ ಸಚಿವಾಲಯವು ‘ಪ್ರಗ್ಯತಾ’ ಎಂಬ ಮಾರ್ಗಸೂಚಿ ಸಿದ್ಧಪಡಿಸಿದೆ.
ಜತೆಗೆ ಆನ್ಲೈನ್ ಅಥವಾ ಡಿಜಿಟಲ್ ಕಲಿಕೆಗಾಗಿ ಯೋಜನೆ, ಮನನ, ನಿರ್ವಹಣೆ, ಮಾರ್ಗದರ್ಶನ, ಚರ್ಚೆ, ನಿಯೋಜನೆ, ಜಾಡು ಮತ್ತು ಪ್ರಶಂಸೆ ಎಂಬ 8 ಹಂತಗಳ ಮಾರ್ಗದರ್ಶಿ ನೀಡಿದ್ದು, ಇವುಗಳನ್ನು ಬಳಸಿ ಆನ್ಲೈನ್ ಶಿಕ್ಷಣ ನೀಡುವಂತೆ ಸೂಚಿಸಿದೆ.
ಮಾರ್ಗಸೂಚಿಯಲ್ಲಿ ಏನಿದೆ?
*ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ 30 ನಿಮಿಷಗಳಿಗಿಂತ ಹೆಚ್ಚು ಕಾಲ ಆನ್ಲೈನ್ ಕ್ಲಾಸ್ ನಡೆಸುವಂತಿಲ್ಲ.
*1ರಿಂದ 8ನೇ ತರಗತಿವರೆಗೆ 45 ನಿಮಿಷಗಳ ಅವಧಿಯ ಎರಡು ಆನ್ಲೈನ್ ಸೆಷನ್.
*9ರಿಂದ 12ನೇ ತರಗತಿ ವರೆಗೆ 30-45 ನಿಮಿಷಗಳ ಅವಧಿಯ ನಾಲ್ಕು ಸೆಷನ್.
ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಕ್ರಿಯಾಲ್ ನಿಶಾಂಕ್ ಅವರು, ಕೊರೋನಾ ಸಾಂಕ್ರಾಮಿಕ ರೋಗ ಶೀಘ್ರವಾಘಿ ಕೊನೆಗೊಳ್ಳುವಂತದ್ದಲ್ಲ. ಹೀಗಾಗಿ ನಮ್ಮ ಶೈಕ್ಷಣಿಕ ವ್ಯವಸ್ಥೆ ಬದಲಾದ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಶಾಲೆಗಳು ಇಲ್ಲಿಯವರೆಗಿನ ಬೋಧನೆ ಮತ್ತು ಕಲಿಕೆಯ ವಿಧಾನವನ್ನು ನೂತನವಾಗಿ ಮರುರಚನೆ ಮಾಡಬೇಕಾಗಿಎ ಎಂದು ಅಭಿಪ್ರಾಯಪಟ್ಟಿದ್ದಾರೆ