ಜೈಪುರ, ಜು 15 (Daijiworld News/MSP): ರಾಜಸ್ಥಾನದಲ್ಲಿ ಸಿಎಂ ಗೆಹ್ಲೀಟ್ ಮತ್ತು - ಸಚಿನ್ ಪೈಲೆಟ್ ನಡುವಿನ ಬಿರುಕು ದೊಡ್ಡದಾಗಿ ಪೈಲೆಟ್ ಅವರನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಸಚಿನ್ ಬಿಜೆಪಿ ಸೇರುತ್ತಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ.
ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದ ವೇಳೆ ಈ ವದಂತಿ ತಳ್ಳಿಹಾಕಿದ ಪೈಲೆಟ್ " ನಾನು ಎಂದಿಗೂ ಬಿಜೆಪಿಗೆ ಸೇರಲಾರೆ ನನ್ನನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ತೆಗೆಯಲಾಗಿದ್ದರೂ ನಾನಿನ್ನೂ ಕಾಂಗ್ರೆಸ್ ಕಾರ್ಯಕರ್ತ. ಹೀಗಾಗಿ ಮುಂದಿನ ನಡೆ ಬಗ್ಗೆ ನನ್ನ ಕಾರ್ಯಕರ್ತರ ಜೊತೆಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಅವರ ಜೊತೆಗೆ ಕೆಲಸ ಮಾಡುತ್ತೇನೆ" ಎಂದು ಸಚಿನ್ ಪೈಲಟ್ ಹೇಳಿದ್ದಾರೆ.
"ವಸುಂಧರಾ ರಾಜೆ ಅವರ ಸರಕಾರದ ಗಣಿ ಅವ್ಯವಹಾರಗಳ ಕುರಿತು ಜನತೆಗೆ ಬಹಿರಂಗಪಡಿಸುತ್ತಾ ನಾವು ಚುನಾವಣೆ ಎದುರಿಸಿ ಗೆದ್ದಿದ್ದೇವೆ. ನಾನು ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ತರಲು ಸಾಕಷ್ಟು ಶ್ರಮಿಸಿದ್ದೇವೆ. ಆದರೆ ಈಗ ಸಿಎಂ ಗೆಹ್ಲೋಟ್ ಅವರು ನಾನುಬಿಜೆಪಿಯೊಂದಿಗೆ ಸೇರಿ ಸರ್ಕಾರ ಉರುಳಿಸುವ ಕೆಲಸಕ್ಕೆ ಪೈಲಟ್ ಕೈಹಾಕಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ತನ್ನದೇ ಸರಕಾರದ ವಿರುದ್ಧ ಯಾಕೆ ಕೆಲಸ ಮಾಡಲಿ ?
ನಾನು ಯಾವುದೇ ವಿಶೇಷ ಸ್ಥಾನಮಾನವನ್ನು ಕೇಳಲಿಲ್ಲ. ಆದರೆ ನಾನು ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ್ದಆಶ್ವಾಸನೆಗಳನ್ನು ಈಡೇರಿಸುವಂತೆ ಕೋರಿಕೊಂಡಿದ್ದೆ. ಆದರೆ ಸಿಎಂ ಗೆಹ್ಲೋಟ್ ಅವರು ಬಿಜೆಪಿ ನಾಯಕರನ್ನು ಅನುಕರಿಸುವಲ್ಲಿ ನಿರತರಾಗಿದ್ದರು. ನನಗೆ ಮತ್ತು ನನ್ನ ಬೆಂಬಲಿಗರಿಗೆ ರಾಜ್ಯದ ಅಭಿವೃದ್ದಿಗೆ ಯಾವುದೇ ಕೆಲಸ ಮಾಡಲು ಅವಕಾಶ ನೀಡಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.