ನವದೆಹಲಿ, ಜು 15 (DaijiworldNews/PY): ಕೊರೊನಾ ಲಸಿಕೆಗಾಗಿ ಮಾನವ ಕ್ಲಿನಿಕಲ್ ಪ್ರಯೋಗಗಳನ್ನು ದೇಶದಲ್ಲಿ ಪ್ರಾರಂಭಿಸಲಾಗಿದ್ದು, ಮನುಷ್ಯರ ಮೇಲಿನ ಕ್ಲಿನಿಕಲ್ ಪ್ರಯೋಗವು ಶೀಘ್ರವೇ ಒಳ್ಳೆಯ ಸುದ್ದಿಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಅವರು, ಭಾರತವು ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕರಲ್ಲಿ ಒಂದಾಗಿರುವುದರಿಂದ ಕೊರೊನಾ ವೈರಸ್ನ ಪ್ರಸರಣದ ಸರಪಳಿಯನ್ನು ಮುರಿಯಲು ಲಸಿಕೆ ಅಭಿವೃದ್ದಿ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ನಡೆಸುವುದು ದೇಶದ ನೈತಿಕ ಜವಾಬ್ದಾರಿ ಎಂದರು.
ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಎರಡು ಲಸಿಕೆಗಳನ್ನು ಅನುಮತಿಸಿದ್ದು, ಒಂದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ ಮತ್ತು ಇನ್ನೊಂದು ಕ್ಲಿನಿಕಲ್ ಮೊದಲ ಮತ್ತು ಎರಡನೆಯ ಹಂತಕ್ಕೆ ಹೋಗಲು ಜೈಡಸ್ ಕ್ಯಾಡಿಲಾ ಹೆಲ್ತ್ಕೇರ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ. ಇದರಲ್ಲಿ ತಲಾ 1,000 ಜನರ ಗುಂಪುಗಳ ಮೇಲೆ ಕೊರೊನಾ ಔಷಧ ವಿವಿಧ ಸ್ಥಳಗಳಲ್ಲಿ ಪರೀಕ್ಷೆ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
ಈಗಾಗಲೇ ಇಲಿಗಳು, ಮೊಲಗಳು ಹಾಗೂ ಇತರ ಜೀವಿಗಳ ಮೇಲೆ ಔಷಧ ಪರಿಣಾಮ ಹಾಗೂ ಇತರ ಅಡ್ಡಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿದ್ದು, ಅದರ ವರದಿಯನ್ನು ಡಿಜಿಸಿಐಗೆ ನೀಡಿವೆ. ಅದರ ನಂತರ ಈ ತಿಂಗಳ ಆರಂಭದಲ್ಲಿ ಆರಂಭಿಕ ಹಂತದ ಮಾನವ ಪ್ರಯೋಗಗಳನ್ನು ಪ್ರಾರಂಭಿಸಲು ಇಬ್ಬರಿಗೂ ಅನುಮತಿ ದೊರೆತಿದೆ. ಇದಕ್ಕೆ ದೇಶದಾದ್ಯಂತ 1 ಸಾವಿರ ಕೊರೊನಾ ಸೋಂಕಿತರ ಮೇಲೆ ಈ ಲಸಿಕೆಯ ಪ್ರಯೋಗ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಆಫ್ರಿಕಾ ಸೇರಿದಂತೆ ಯುರೋಪ್ ದೇಶಗಳಿಗೆ ಸರಬರಾಜು ಮಾಡಿರುವ ಒಟ್ಟಾರೆ ಲಸಿಕೆಗಳಲ್ಲಿ ಶೇ.60ರಷ್ಟು ಲಸಿಕೆಗಳು ಭಾರತೀಯ ಮೂಲದ್ದಾಗಿದೆ ಎಂದು ತಿಳಿಸಿದ್ದಾರೆ.