ನವದೆಹಲಿ ಜು 15 (Daijiworld News/MSP): ಕೋವಿಡ್-19 ಪಿಡುಗಿನ ಈ ಸಂದರ್ಭದಲ್ಲಿ ಮಾಸ್ಕ್ಗಳ ಜತೆಗೆ ಆಲ್ಕೋಹಾಲ್ ಆಧಾರಿತವಾದ ಹ್ಯಾಂಡ್ ಸ್ಯಾನಿಟೈಸರ್ಗಳಿಗೂ ಭಾರಿ ಬೇಡಿಕೆ ಬಂದಿದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಹ್ಯಾಂಡ್ ಸ್ಯಾನಿಟೈಜರ್ ಬಳಕೆಯೂ ಅನಿವಾರ್ಯವಾಗಿದೆ. ಆದ್ರೆ ಇನ್ಮುಂದೆ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್ ಬೆಲೆ ದುಬಾರಿಯಾಗಲಿದೆ.
ಹ್ಯಾಂಡ್ಸ್ಯಾನಿಟೈಸರ್ ಜಿಎಸ್ಟಿ ಎಷ್ಟು ಎಂಬ ಕುರಿತ ಅನುಮಾನ ಬಗೆಹರಿಸಿಕೊಳ್ಳಲು ಗೋವಾ ಮೂಲದ ಹ್ಯಾಂಡ್ಸ್ಯಾನಿಟೈಸರ್ ಉತ್ಪಾದನಾ ಕಂಪನಿಯೊಂದು ಮುಂಗಡ ಆದೇಶ ಪ್ರಾಧಿಕಾರದ ಗೋವಾ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು.ಈ ಅರ್ಜಿಯನ್ನು ಇತ್ಯರ್ಥಪಡಿಸಿರುವ ಆದೇಶ ಪ್ರಾಧಿಕಾರ , ಸ್ಯಾನಿಟೈಸರ್ಗಳು "ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ " ಎಂಬ ವರ್ಗಕ್ಕೆ ಸೇರುತ್ತವೆ ಎಂದಿದೆ.ಆದ್ದರಿಂದ, ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ಗಳ ಮೇಲೆ ಶೇ.18 ಜಿಎಸ್ಟಿ ವಿಧಿಸಬಹುದಾಗಿದೆ ಎಂದು ಹೇಳಿದೆ.
ಮಾರ್ಚ್ನಲ್ಲಿ ಮೊದಲ ಬಾರಿಗೆ ಕೋವಿಡ್ ಲಾಕ್ಡೌನ್ ಜಾರಿಗೊಳಿಸಿದ್ದ ಸಂದರ್ಭದಲ್ಲಿ ಇದು ಅಗತ್ಯವಸ್ತುಗಳ ಪಟ್ಟಿಯಲ್ಲಿತ್ತು. ಆದರೆ ಈಗ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ಗಳ ದಾಸ್ತಾನು ಸಾಕಷ್ಟು ಇದ್ದು, ಮಾರುಕಟ್ಟೆಯಲ್ಲಿ ಲಭ್ಯತೆಗೆ ಯಾವುದೇ ಅಡ್ಡಿಯಿಲ್ಲ ಎಂಬ ಕಾರಣಕ್ಕೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಇದನ್ನು ಅಗತ್ಯವಸ್ತುಗಳ ಪಟ್ಟಿಯಿಂದ ಕೈಬಿಟ್ಟಿದೆ. ಈ ನಡುವೆ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್ ಮೇಲ್ ಶೇ.18 ಜಿಎಸ್ಟಿ ವಿಧಿಸಬಹುದಾಗಿರುವುದರಿಂದ ಇನ್ನಷ್ಟು ದುಬಾರಿಯಾಗುವ ಸಂಭವವಿದೆ.