ನವದೆಹಲಿ ಜು 15 (Daijiworld News/MSP): ಸಾಂಕ್ರಮಿಕ ರೋಗದ ಸಂಕಷ್ಟದ ಈ ಸಮಯದಲ್ಲಿ, ನಾವು ಪ್ರಸ್ತುತವಾಗಿರಲು ಮತ್ತು ಯಾವುದೇ ಸವಾಲುಗಳನ್ನು ಎದುರಿಸಲು ನಮ್ಮಲ್ಲಿರುವ ಕೌಶಲ್ಯಗಳ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ವಿಶ್ವ ಯುವಕರ ಕೌಶಲ್ಯ ದಿನದ ಅಂಗವಾಗಿ ದೆಹಲಿಯಲ್ಲಿ ಡಿಜಿಟಲ್ ಶೃಂಗವನ್ನುದ್ದೇಶಿಸಿ ಮಾತನಾಡಿದ ಅವರು, ಕೊವೀಡ್ ನ ಈ ಕಾಲಘಟ್ಟದಲ್ಲಿ ವೃತ್ತಿ ಸಂಸ್ಕೃತಿ ಬದಲಾಗುತ್ತದೆ. ಕೆಲಸದ ಕಾರ್ಯ ವೈಖರಿ ಬದಲಾಗುತ್ತದೆ. ವೇಗವಾಗಿ ತಂತ್ರಜ್ಞಾನ ಬದಲಾಗುತ್ತಿರುವ ಈ ಸಮಯಗಳಲ್ಲಿ ನಮ್ಮ ಮೇಲೆ ಅಗಾಧ ಪ್ರಭಾವ ಬೀರುತ್ತಿದೆ, ಅದಕ್ಕೆ ತಕ್ಕಂತೆ ನಾವು ಹಾಗೂ ಯುವಕರು ಆಧುನೀಕರಣವಾಗುತ್ತಿರಬೇಕು.
ನಾವು ಎಂದಿಗೂ ಹೊಸ ಕೌಶಲ್ಯ, ಮರು ಕೌಶಲ್ಯ, ಹೆಚ್ಚು ಕೌಶಲ್ಯ ಹೊಂದಬೇಕಾಗಿದ್ದು ಇದೇ ಯಶಸ್ಸಿನ ಮೂಲ ಮಂತ್ರವಾಗಿದೆ. ಇದು ನಮಗೆ ನಾವು ಕೊಡುತ್ತಿರುವ ಉತ್ತಮ ಉಡುಗೊರೆಯಾಗಿದೆ. ಹೀಗಾದ್ರೆ ಮಾತ್ರ ನಾವು ಯಾವ ಕಾಲಕ್ಕೂ ಸಲ್ಲುವವರಾಗಿ, ಯಾವತ್ತಿಗೂ ಪ್ರಸ್ತುತವಾಗುಳಿಯುತ್ತೇವೆ ಎಂದು ಯುವಜನಾಂಗಕ್ಕೆ ಕಿವಿಮಾತು ಹೇಳಿದರು.
ಇಂಟರ್ನೆಟ್ ಮೂಲಕ ನೋಡಿ ಮಾಹಿತಿ ಪಡೆದುಕೊಂಡಿದ್ದರೆ ಅದು ತಿಳುವಳಿಕೆ ಎನಿಸುತ್ತದೆಯೇ ಹೊರತು, ಕೌಶಲ್ಯವೆನಿಸಲಾರದು. ತಿಳುವಳಿಕೆ ಮತ್ತು ಕೌಶಲ್ಯದ ನಡುವೆ ಗೊಂದಲವಿರಬಾರದು. ವಿಡಿಯೋ ನೋಡಿ ಸೈಕಲ್ ತುಳಿಯುವುದನ್ನು ಕಲಿಯಲು ಸಾಧ್ಯವೇ? ಅದು ರೂಢಿಸಿ ಅಭ್ಯಾಸಿಸಿದಾಗ ಮಾತ್ರ ಸಾಧ್ಯ ಎಂದು ಪ್ರಧಾನಿ ವಿವರಿಸಿ ಹೇಳಿದರು.