ಚಿತ್ರದುರ್ಗ, ಜು 15 (DaijiworldNews/PY): ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಭಗವಂತ ಒಬ್ಬನೇ ನಮ್ಮನ್ನು ಕೊರೊನಾದಿಂದ ಕಾಪಾಡಬೇಕು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಣ ಮಾಡಲು ಯಾರಿಂದ ಸಾಧ್ಯವಿದೆ? ದೇವರೇ ಇಂದು ನಮ್ಮನ್ನು ಕೊರೊನಾದಿಂದ ರಕ್ಷಿಸಬೇಕು. ಇದಲ್ಲದೇ, ಜನರಲ್ಲಿ ಕೊರೊನಾ ಜಾಗೃತಿ ಮೂಡಬೇಕು. ಇಂತಹ ಸಂದರ್ಭದಲ್ಲಿ ಯಾವುದೇ ವಿಚಾರದ ಬಗ್ಗೆ ಕಾಂಗ್ರೆಸ್ಸಿಗರು ಮಾತನಾಡುವಾಗ ಎಲ್ಲವನ್ನೂ ಬಿಗಿಹಿಡಿದು ಮಾತನಾಡಬೇಕು. ನಾವು ತಪ್ಪು ಮಾಡಿದ್ದಲ್ಲಿ ಶಿಕ್ಷೆಗೆ ಅರ್ಹರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು 2 ತಿಂಗಳಲ್ಲಿ ಮತ್ತಷ್ಟು ಸೋಂಕು ಅಧಿಕವಾಗುವ ಸಾಧ್ಯತೆ ಶೇ.100ರಷ್ಟಿದೆ. ಕೊರೊನಾ ಸೋಂಕು ಬಡವ-ಶ್ರೀಮಂತ ಎಂದು ಬರುತ್ತಿಲ್ಲ.ಇನ್ನು ಸರ್ಕಾರದ ನಿರ್ಲಕ್ಷ್ಯ ಹಾಗೂ ಶಾಸಕರ ನಡುವೆ ಹೊಂದಾಣಿಕೆ ಇಲ್ಲದ ಕಾರಣದಿಂದ ಕೊರೊನಾ ಜಾಸ್ತಿಯಾಗುತ್ತಿದೆ ಎನ್ನುವ ಆರೋಪವು ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಯಂತ್ರೋಪಕರಣದಿಂದ ಶವಸಂಸ್ಕಾರದ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಅಂತ್ಯ ಸಂಸ್ಕಾರವನ್ನು ಊರ ಮಧ್ಯದ ಸ್ಮಶಾನ ಭೂಮಿಯಲ್ಲಿ ಮಾಡದಂತೆ ತಿಳಿಸಲಾಗಿದ್ದು, ಸರ್ಕಾರದಿಂದ ಅಂತ್ಯ ಸಂಸ್ಕಾರಕ್ಕೆ 2 ಎಕರೆ ಭೂಮಿಯನ್ನು ಕಾಯ್ದಿಡುವ ವಿಚಾರದ ಬಗ್ಗೇ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.