ನವದೆಹಲಿ,ಜು 15 (Daijiworld News/MSP): ಜಮ್ಮು ಮತ್ತು ಕಾಶ್ಮೀರದ ಸೋಪೋರ್ ಜಿಲ್ಲೆಯ ವಾಟರ್ಗಾಮ್ ಮುನ್ಸಿಪಲ್ ಸಮಿತಿಯ ಉಪಾಧ್ಯಕ್ಷ, ಬಿಜೆಪಿ ಮುಖಂಡ ಮೆಹ್ರಾಜುದ್ದೀನ್ ಮಲ್ಲಾ ಅವರನ್ನು ಬುಧವಾರ ಬೆಳಗ್ಗೆ ದುಷ್ಕರ್ಮಿಗಳು ಕಿಡ್ನಾಪ್ ಮಾಡಿದ್ದು ಅವರ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಜುಲೈ 8 ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಕಾರ್ಯಕಾರಿ ಸದಸ್ಯ ವಾಸೀಂ ಬರಿ ಅವರನ್ನು ಬಂಡಿಪೋರಾದ ಮನೆಯ ಹೊರಗೆ ಭಯೋತ್ಪಾದಕರು ಗುಂಡಿಟ್ಟು ಹತ್ಯೆಗೈದಿದ್ದರು. ಈ ಸುದ್ದಿ ಮಾಸುವ ಮುನ್ನವೇ ಮೆಹ್ರಾಜುದ್ದೀನ್ ಮಲ್ಲಾ ಅವರನ್ನು ಅಪಹರಿಸಲಾಗಿದೆ.
ಮೆಹ್ರಾಜುದ್ದೀನ್ ಅವರು ಬೆಳಗ್ಗೆ ಎಂಟೂವರೆ ಸುಮಾರಿಗೆ ತಮ್ಮ ಮನೆ ಸಮೀಪದ ರಸ್ತೆ ಬಳಿ ನಿಂತಿದ್ದಾಗ ಅಪರಿಚಿತ ವ್ಯಕ್ತಿಗಳು ಬಲವಂತವಾಗಿ ಎಳೆದೊಯ್ದಿದ್ದಾರೆ ಎಂದು ಪೊಲೀಸ್ ಅಧಿಕಾರಿ ಖಚಿತಪಡಿಸಿದ್ದಾರೆ.
ಸೋಪೋರಾದ ಜಿಲ್ಲೆಯ ಒಳ ಮತ್ತು ಹೊರ ಹೋಗುವ ದಾರಿಗಳಲ್ಲಿ ಬಿಗಿ ಭದ್ರತೆಯಲ್ಲಿ ಕಣ್ಗಾವಲು ಇಡುವಂತೆ ಪೊಲೀಸರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಭದ್ರತಾ ಪಡೆಯ ನೆರವು ಕೋರಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.