ಜಮ್ಮು- ಕಾಶ್ಮೀರ, ಜು 16 (Daijiworld News/MSP):ದುಷ್ಕರ್ಮಿಗಳಿಂದ ಕಿಡ್ನಾಪ್ ಗೆ ಒಳಗಾಗಿದ್ದ ಜಮ್ಮು ಮತ್ತು ಕಾಶ್ಮೀರದ ಸೋಪೋರ್ ಜಿಲ್ಲೆಯ ವಾಟರ್ಗಾಮ್ ಮುನ್ಸಿಪಲ್ ಸಮಿತಿಯ ಉಪಾಧ್ಯಕ್ಷ, ಬಿಜೆಪಿ ಮುಖಂಡ ಮೆಹ್ರಾಜುದ್ದೀನ್ ಮಲ್ಲಾ ಅವರನ್ನು ಭದ್ರತಾ ಪಡೆಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿಯಾಗಿ ಒಂದು ದಿನದ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಜುಲೈ 8 ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಕಾರ್ಯಕಾರಿ ಸದಸ್ಯ ವಾಸೀಂ ಬರಿ ಅವರನ್ನು ಬಂಡಿಪೋರಾದ ಮನೆಯ ಹೊರಗೆ ಭಯೋತ್ಪಾದಕರು ಗುಂಡಿಟ್ಟು ಹತ್ಯೆಗೈದಿದ್ದರು. ಈ ಸುದ್ದಿ ಮಾಸುವ ಮುನ್ನವೇ ಮೆಹ್ರಾಜುದ್ದೀನ್ ಮಲ್ಲಾ ಅವರನ್ನು ಅಪಹರಿಸಲಾಗಿತ್ತು. ಮೆಹ್ರಾಜುದ್ದೀನ್ ಅವರು ಬೆಳಗ್ಗೆ ಎಂಟೂವರೆ ಸುಮಾರಿಗೆ ತಮ್ಮ ಮನೆ ಸಮೀಪದ ರಸ್ತೆ ಬಳಿ ನಿಂತಿದ್ದಾಗ ಅಪರಿಚಿತ ವ್ಯಕ್ತಿಗಳು ಬಲವಂತವಾಗಿ ಎಳೆದೊಯ್ದಿದ್ದಾರೆ ಎಂದು ಪೊಲೀಸ್ ಅಧಿಕಾರಿ ಖಚಿತಪಡಿಸಿದ್ದರು. ಹೀಗಾಗಿ ಸೋಪೋರಾದ ಜಿಲ್ಲೆಯ ಒಳ ಮತ್ತು ಹೊರ ಹೋಗುವ ದಾರಿಗಳಲ್ಲಿ ಪೊಲೀಸರು ಬಿಗಿ ಭದ್ರತೆಯಲ್ಲಿ ಕಾವಲು ಕಾಯುತ್ತಿದ್ದರು.
ಕಾರ್ಯಾಚರಣೆಯಲ್ಲಿ ಲಷ್ಕರ್ ಸಂಘಟನೆಯ ಸೊಪೋರ್ ಕಮಾಂಡರ್ ಸಜಾದ್ ಅಲಿಯಾಸ್ ಹೈದರ್ ಅವರ ಕುಟುಂಬ ಸದಸ್ಯರನ್ನು ಬಂಧಿಸಲಾಗಿದೆ. ಜಮ್ಮು ಕಾಶ್ಮೀರ ಪೊಲೀಸರಿಗೆ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಹೈದರ್ ಬೆದರಿಕೆ ಹಾಕಿದ ಎರಡು ದಿನಗಳ ನಂತರ ಮೇರಾಜುದ್ದೀನ ಅಪಹರಣ ನಡೆದಿದೆ. ಕಾಶ್ಮೀರದ ಇನ್ಸ್ಪೆಕ್ಟರ್ ಜನರಲ್ (ಐಜಿ) ಗೂ ಉಗ್ರರು ಇದೇ ರೀತಿಯ ಬೆದರಿಕೆಗಳನ್ನು ಹಾಕಿದ್ದರು ಎಂದು ತಿಳಿದುಬಂದಿದೆ.