ಬೆಂಗಳೂರು, ಜು 16 (DaijiworldNews/PY): ಕೊರೊನಾದಿಂದ ಗುಣಮುಖರಾದವರು ತಮ್ಮ ಪ್ಲಾಸ್ಮಾ ದಾನ ಮಾಡುವ ಮೂಲಕ ಜೀವದಾನ ಮಾಡಬೇಕೆಂದು ಮನವಿ ಮಾಡುತ್ತೇನೆ. ಪ್ಲಾಸ್ಮಾ ದಾನಿಗಳಿಗೆ ಗೌರವಯುತವಾಗಿ 5000 ರೂಪಾಯಿಗಳ ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ಕೊರೊನಾ ಸೋಂಕಿನಿಂದ ಗುಣಮುಖರಾದವರು 14-28 ದಿನಗಳ ಒಳಗೆ ಓರ್ವನಿಗೆ ಒಂದೇ ಬಾರಿ ಮಾತ್ರವೇ ಪ್ಮಾಸ್ಮಾ ದಾನ ಮಾಡಲು ಅವಕಾಶವಿದೆ.
ಬೆಂಗಳೂರಿನಲ್ಲಿ 8134 ಬೂತ್ ಮಟ್ಟದ ಕಾರ್ಯಪಡೆಗಳ ಮೂಲಕ ಮನೆ ಮನೆ ಸರ್ವೇ ನಡೆಸಿ ಐಎಲ್ಐ, ಎಸ್ಎಆರ್ಐ ಲಕ್ಷಣಗಳಿರುವ ವ್ಯಕಿಗಳ ಪತ್ತೆ, 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರ ರಿವರ್ಸ್ ಐಸೋಲೇಶನ್ ಸೇರಿದಂತೆ ಹಲವು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಬಿಎಲ್ಒ, ಸ್ವಯಂ ಸೇವಕರು ಸೇರಿದಂತೆ ಹಲವು ಸ್ಥಳೀಯರು ಕಾರ್ಯಪಡೆಯ ಸದಸ್ಯರಾಗಿರುತ್ತಾರೆ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಇನ್ನು ಸಮೀಕ್ಷೆಗಾಗಿ ಬೂತ್ ಮಟ್ಟದಲ್ಲಿನ ಸಮಿತಿಗಳಿಗೆ ಪಲ್ಸ್ ಆಕ್ಸಿಮೀಟರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಯಂತ್ರಗಳನ್ನು ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. ಸಮನ್ವಯದ ಉಸ್ತುವಾರಿಯನ್ನು ಹಿರಿಯ ಅಧಿಕಾರಿ ಶಾಲಿನಿ ರಜನೀಶ್ ಅವರಿಗೆ ವಹಿಸಲಾಗಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಬೆನ್ನಲ್ಲೇ ಸರ್ಕಾರವು ತ್ವರಿತವಾಗಿ ವರದಿಯನ್ನು ನೀಡಲು ತೀರ್ಮಾನಿಸಿದೆ. ಕೊರೊನಾ ಸೋಂಕಿನ ಪ್ರಮಾಣ ಇನ್ನು ಎರಡು ತಿಂಗಳು ಶೇ.100ರಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ. ಇತ್ತೀಚೆಗೆ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಸಿಎಂ ಅವರು ಕಟ್ಟುನಿಟ್ಟಾಗಿ ಸೂಚನೆ ನೀಡಿದ ಬೆನ್ನಲ್ಲೇ ಸಚಿವರು, ಅಧಿಕಾರಿ ಎಚ್ಚೆತ್ತುಕೊಂಡಿದ್ದು, ಕೊರೊನಾ ಸೋಂಕು ನಿಯಂತ್ರಣಕ್ಕೆ ಮುಂಬೈನ ಧಾರಾವಿಯಲ್ಲಿ ಕೈಗೊಂಡ ಕ್ರಮಗಳನ್ನು ಅನುಸರಿಸಲು ನಿರ್ಧಾರ ಮಾಡಿದ್ದಾರೆ.