ನವದೆಹಲಿ,ಜು 16 (Daijiworld News/MSP): ಭಾರತದಲ್ಲಿ ಲಾಕ್ ಡೌನ್, ಆರ್ಥಿಕ ಮುಗ್ಗಟ್ಟಿನ ಮಧ್ಯೆ ಕೊರೊನಾ ಸೋಂಕು ಸೆಪ್ಟೆಂಬರ್ ವೇಳೆಗೆ ಭಾರತದಲ್ಲಿ ಉಗ್ರ ಸ್ವರೂಪ ಪಡೆಯಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಎಚ್ಚರಿಕೆ ನೀಡಿದೆ.
ಭಾರತದಲ್ಲಿ ಕೊವೀಡ್ -19 ಸೋಂಕಿನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೆಪ್ಟೆಂಬರ್ ತಿಂಗಳ ವೇಳೆಗೆ ಇದರ ಆರ್ಭಟ ಹೆಚ್ಚಳವಾಗಲಿದ್ದು ಸುಮಾರು ದೇಶದಲ್ಲಿ 35 ಲಕ್ಷಕ್ಕೂ ಅಧಿಕ ಮಂದಿ ಈ ಸೋಂಕಿಗೆ ತುತ್ತಾಗಲಿದ್ದಾರೆ ಎಂದು ಹೇಳಿದೆ.
ಕೊರೊನಾ ಪೀಡಿತ ಜಾಗತಿಕ ದೇಶಗಳಲ್ಲಿ ಈಗಾಗಲೇ ಭಾರತ ಮೂರನೇ ಸ್ಥಾನಕ್ಕೇರಿದೆ. 2020 ಕ್ಕೆ ಮಾತ್ರವಲ್ಲದೆ ಕೊರೊನಾ ತನ್ನ ಕರಾಳಹಸ್ತವನ್ನು ಮುಂದಿನ ವರ್ಷಕ್ಕೂ ಚಾಚಲಿದ್ದು ಅಮೆರಿಕಗಿಂತಲೂ ಭಾರತದಲ್ಲಿ ಸೋಂಕು ಅತಿ ಹೆಚ್ಚು ಅನಾಹುತ ತಂದೊಡ್ಡಲಿದೆ ಮಾತ್ರವಲ್ಲದೆ, 2021ರ ಮಾರ್ಚ್ ಅಂತ್ಯದ ವೇಳೆಗೆ ಆರು ಕೋಟಿಗೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಈಗಾಗಲೇ ಕೊರೊನಾ ಪೀಡಿತರ ಸಂಖ್ಯೆ ದುಪ್ಪಟ್ಟಾಗುತ್ತಾ ಸಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಒಂದೇ ದಿನ ದೇಶದಲ್ಲಿ 32,695 ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 9,68,876ಕ್ಕೆ ಏರಿಕೆಯಾಗಿದೆ. ಹೀಗಾಗಿ ಆಗಸ್ಟ್ ವೇಳೆಗೆ ಗುಣಮುಖರಾದವರನ್ನು ಹೊರತುಪಡಿಸಿ 10 ಲಕ್ಷ ಸಕ್ರಿಯ ಪ್ರಕರಣಗಳು ಇರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎಂದು ಐಐಎಸ್ಸಿ ಎಚ್ಚರಿಕೆ ನೀಡಿದೆ.