ಚೆನ್ನೈ, ಜು 16 (DaijiworldNews/PY): ತಮಿಳುನಾಡು ಭಾರತೀಯ ಜನತಾ ಪಕ್ಷ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಿ ಪ್ರಕಟಣೆ ಹೊರಡಿಸಿದೆ. ರಾಜ್ಯಾಧ್ಯಕ್ಷ ಎಲ್ ಮುರುಗನ್ ಅವರು ಮುಂದಿನ ವರ್ಷದ ಚುನಾವಣೆಗೂ ಮೊದಲು ಪಕ್ಷದ ಸದಸ್ಯ ಬಲವನ್ನು ಹೆಚ್ಚಿಸಲು ಸಜ್ಜಾಗಿದ್ದಾರೆ.
ತಮಿಳುನಾಡು ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿ ಮತ್ತು ವಿವಿಧ ಸಮಿತಿಗಳಿಗೆ ಬುಧವಾರ ನೇಮಕಗೊಂಡವರಲ್ಲಿ ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾ ರಾಣಿ, ದಿವಂಗತ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಅವರ ಕುಟುಂಬ ಮತ್ತು ಚಿತ್ರರಂಗದ ವ್ಯಕತಿಗಳು ಸೇರಿದ್ದಾರೆ.
ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾರಾಣಿ ಅವರು ಈ ವರ್ಷದ ಫೆಬ್ರವರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಅವರನ್ನು ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷೆ ಸ್ಥಾನಕ್ಕೆ ನೇಮಕ ಮಾಡಲಾಗಿದೆ ಎಂದು ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ.
ಸೂಪರ್ ಸ್ಟಾರ್ ರಜನಿಕಂತ್ ಅವರ ಬೀಗರಾದ ನಟ ಧನುಷ್ ತಂದೆ ಕಸ್ತೂರಿ ರಾಜಾ ಅವರು ಬಿಜೆಪಿ ಕಾರ್ಯಕಾರಿಣಿಯ ಸದಸ್ಯರಾಗಿದ್ದಾರೆ. ಇನ್ನು ಬಿಜೆಪಿ ಕಾರ್ಯಕಾರಿಣಿಯಲ್ಲಿ ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್ ಅವರ ದತ್ತು ಪುತ್ರಿ ಗೀತಾ ಅವರಿಗೂ ಸ್ಥಾನ ದೊರಕಿದೆ. 2017 ರಲ್ಲಿ ಬಿಜೆಪಿಗೆ ಸೇರಿದ ಎಂಸಿ ಚಕ್ರಪಾನಿ ಆರ್.ಪ್ರವೀಣ್ ಅವರ ಮೊಮ್ಮಗ ಮತ್ತು ನಟ ರಾಧಾ ರವಿ ಅವರನ್ನು ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿದ್ದು, ನಟ ವಿಜಯಕುಮಾರ್, ನಿರ್ದೇಶಕ ಗಂಗೈ ಅಮರನ್ ಅವರನ್ನು ವಿಶೇಷ ಸಂಘಟಕರಾಗಿ ನೇಮಕ ಮಾಡಲಾಗಿದೆ.
ಸಂಗೀತ ನಿರ್ದೇಶಕ ದಿನಾ ಮತ್ತು ನಿರ್ದೇಶಕ ಪೆರರಸು ಕಲಾ ಮತ್ತು ಸಂಸ್ಕೃತಿ ಕೋಶದ ಕಾರ್ಯದರ್ಶಿಗಳಾಗಿದ್ದರೆ, ನಟ ಆರ್.ಕೆ.ಸುರೇಶ್ ರಾಜ್ಯ ಒಬಿಸಿ ಕೋಶದ ಹೊಸ ಉಪಾಧ್ಯಕ್ಷರಾಗಿದ್ದಾರೆ.
ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಗೆ 38 ಸದಸ್ಯರು, ಯುವ ವಿಭಾಗ, ಮಹಿಳಾ ವಿಭಾಗ ಮತ್ತು ಮೀನುಗಾರರು, ನೇಕಾರರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಘಟಕಗಳಿಗೆ ಎಲ್ ಮುರುಗನ್ ಅವರು ಪದಾಧಿಕಾರಿಗಳನ್ನು ನೇಮಿಸಿದ್ದಾರೆ.