ಸೂರತ್, ಜು 16 (Daijiworld News/MSP): ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದ ಕಾರಣ ಗುಜರಾತ್ ಸಚಿವರ ಮಗನ ವಿರುದ್ದವೇ ಕ್ರಮ ಕೈಗೊಂಡಿದ್ದ ಗುಜರಾತ್ ಮಹಿಳಾ ಪೊಲೀಸ್ ಕೆಲಸಕ್ಕೇ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದು , ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಸೂರತ್ನಲ್ಲಿ ವಿಧಿಸಿದ್ದ ರಾತ್ರಿ ಕರ್ಫ್ಯೂ ಮತ್ತು ಲಾಕ್ಡೌನ್ ನಿಯಮಾವಳಿಗಳನ್ನು ಗುಜರಾತ್ನ ಆರೋಗ್ಯ ಖಾತೆ ರಾಜ್ಯ ಸಚಿವ ಕುಮಾರ್ ಕಣಾನಿ ಅವರ ಪುತ್ರ ಪ್ರಕಾಶ್ ಕಣಾನಿ ಹಾಗೂ ಅವರ ಇಬ್ಬರು ಸ್ನೇಹಿತರು ಉಲ್ಲಂಘಿಸಿದ್ದನ್ನು ಮಹಿಳಾ ಕಾನ್ಸ್ಟೆಬಲ್ ಸುನೀತಾ ಯಾದವ್ ಪ್ರಶ್ನಿಸಿದ್ದರು.
ಈ ವೇಳೆ ನಡೆದಿದ್ದ ಪೊಲೀಸ್ ಹಾಗೂ ಕಣಾನಿ ಸ್ನೇಹಿತರ ನಡುವಿನ ಮಾತಿನ ಚಕಮಕಿ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಸುನೀತಾ ಕೈಗೊಂಡ ಕ್ರಮದಿಂದಾಗಿ ಎಫ್ಐಆರ್ ದಾಖಲಿಸಿ ಮೂವರನ್ನು ಬಂಧಿಸಿ ಆ ಬಳಿಕ ಜಾಮೀನನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಸುನಿತಾ ಯಾದವ್ ಕಾರ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದುಇವರನ್ನು 'ಲೇಡಿ ಸಿಂಗಂ' ಎಂದು ಕರೆದಿದ್ದರು. " ನಾನು ನನ್ನ ಕರ್ತವ್ಯ ನಿಭಾಯಿಸಿದ್ದು, ಇದಕ್ಕೆ ನನ್ನ ಹಿರಿಯ ಅಧಿಕಾರಿಗಳಿಂದ ಬೆಂಬಲ ಸಿಗಲಿಲ್ಲ ಹೀಗಾಗಿ, ಕಾನ್ಸ್ಟೆಬಲ್ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ’ ಎಂದು ಸುನೀತಾ ಹೇಳಿದ್ದಾರೆ.
ಆದರೆ, ಸುನೀತಾ ರಾಜೀನಾಮೆ ನೀಡಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ವಿಚಾರಣೆ ಹಂತದಲ್ಲಿ ತಾಂತ್ರಿಕವಾಗಿ ರಾಜೀನಾಮೆ ನೀಡಲು ಅವಕಾಶವಿಲ್ಲ ಎಂದು ಸೂರತ್ ಪೊಲೀಸ್ ಆಯುಕ್ತ ಆರ್.ಬಿ. ಬ್ರಹ್ಮಭಟ್ಟ ತಿಳಿಸಿದ್ದಾರೆ.