ಬೆಂಗಳೂರು, ಜು 16 (DaijiworldNews/PY): ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವುದರ ಹಿಂದೆ ಭಾರಿ ಷಡ್ಯಂತ್ರವಿದೆ. ಇದರಲ್ಲಿ ಇಡೀ ಸರ್ಕಾರವೇ ಭಾಗಿ ಆಗಿದೆ. ಗಣಿ ಹಗರಣಕ್ಕಿಂತ ಇದು ದೊಡ್ಡದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾವು ಭೂ ಸುಧಾರಣಾ ಕಾಯ್ದೆಗಾಗಿ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿ ಬಂಡವಾಳಶಾಹಿಗಳಿಗೆ ಅನುಕೂಲ ಒದಗಿಸಿದೆ. ಬಿಜೆಪಿ ಸರ್ಕಾರ ಹೀಗೆ ಮಾಡಲು ಹೋಗಿ ಇಡೀ ರೈತ ಸಮುದಾಯವನ್ನು ನಾಶಪಡಿಸಲು ಮುಂದಾಗಿದೆ ಎಂದರು.
ಸಂಪುಟ ಸಭೆಯ ವೇಳೆ ಕಾಯ್ದೆಗೆ ತಿದ್ದುಪಡಿ ತರುವ ವಿಚಾರವಾಗಿ ನಿರ್ಧಾರ ಕೈಗೊಳ್ಳುವ ಸಂದರ್ಭ ಕಾಂಗ್ರೆಸ್ ವಿರೋಧ ಮಾಡಿತ್ತು. ಕಾಂಗ್ರೆಸ್, ಸರ್ಕಾರದ ತೀಮಾನದ ವಿರುದ್ದ ಹೋರಾಟ ಮಾಡಲಿದೆ. ಈ ಹೋರಾಟವನ್ನು ಹಳ್ಳಿ ಮಟ್ಟದಿಂದ ಸಂಘಟಿಸಲಾಗುವುದು. ಸರ್ಕಾರವು ಕೊರೊನಾದ ಈ ಸಂಕಷ್ಟದ ಸಂದರ್ಭ ಸುಗ್ರೀವಾಜ್ಞೆ ಜಾರಿ ಮಾಡುವುದಿಲ್ಲ ಎಂದು ತಿಳಿದಿದ್ದೆವು. ಆದರೆ, ಸರ್ಕಾರ ಈ ಸಂದರ್ಭವನ್ನು ಬಳಸಿಕೊಂಡು ಸುಗ್ರೀವಾಜ್ಞೆ ಜಾರಿ ಮಾಡಿದೆ. ಸುಗ್ರೀವಾಜ್ಞೆಯನ್ನು ಪ್ರಕಟಿಸಿದ ದಿನ ಕರ್ನಾಟಕ್ಕೆ ಕರಾಳ ದಿನವಾಗಿದೆ. ಕೊರೊನಾ ಸಂದರ್ಭ ಸುಗ್ರೀವಾಜ್ಞೆ ಜಾರಿ ಮಾಡುವ ಅಗತ್ಯವಿತ್ತಾ ಎಂದು ತಿಳಿಸಿದರು.
ಬಾಕಿ ಇದ್ದ ಸುಮಾರು 13,814 ಪ್ರಕರಣಗಳು ಈ ಪ್ರಕರಣದಿಂದ ವಜಾಗೊಳ್ಳಲಿವೆ. ಬೆಂಗಳೂರಿನ ಸುತ್ತಮುತ್ತಲಿರುವ ಸುಮಾರು 45-50 ಸಾವಿರ ಕೋಟಿ ರೂಪಾಯಿ ಬೆಳೆ ಬಾಳುವ ಜಮೀನಿನ ಪ್ರಕರಣಗಳನ್ನು ವಜಾಗೊಳಿಸಿದ್ದಾರೆ. ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 63ಕ್ಕೆ ತಿದ್ದುಪಡಿ ತಂದಿದ್ದಾರೆ. 118 ಎಕರೆ ಮಿತಿಯ ಒಂದು ಕುಟುಂಬಕ್ಕೆ ಇತ್ತು. ಅದನ್ನು 436 ಎಕರೆಗೆ ಹೆಚ್ಚಿಸಿದ್ಧಾರೆ. ಎಂದರು.
ಭಾರತವು ಕೊರೊನಾ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು ನಾಲ್ಕನೇ ಸ್ಥಾನದಲ್ಲಿದೆ. ಕೊರೊನಾ ನಿಯಂತ್ರಣ ಮಾಡುವುದನ್ನು ಬಿಟ್ಟು ಕಳ್ಳದಾರಿ ಹಿಡಿದಿದ್ದಾರೆ. ಇದಕ್ಕಾಗಿ ಈಗ ಕೊರೊನಾ ಸಂದರ್ಭವನ್ನು ಬಳಸಿಕೊಂಡಿದ್ದಾರೆ. ಇದು ಕರಾಳ ಸುಗ್ರೀವಾಜ್ಞೆ ಎಂದು ಹೇಳಿದರು.
ಬಿಜೆಪಿ ಸರ್ಕಾರವು ಹಳೆಯ ಪದ್ದತಿಗಳಾದ ಜಹಗೀರದಾರ ಹಾಗೂ ಜಮೀನ್ದಾರಿ ಪದ್ದತಿಯನ್ನು ಮತ್ತೆ ಜಾರಿಗೆ ತರುವ ಪ್ರಯತ್ನವನ್ನು ಮಾಡುತ್ತಿದೆ. ಅಂಬಾನಿ ಅದಾನಿ ಕೃಷಿ ಮಾಡುವುದಿಲ್ಲ. ಬದಲಾಗಿ ರಿಯಲ್ ಎಸ್ಟೇಟ್ ಮಾಡುತ್ತಾರೆ. ಕಾಯ್ದೆ ತಿದ್ದುಪಡಿ ಮಾಡಲು ರಿಯಲ್ ಎಸ್ಟೇಟ್ ಉದ್ಯಮಿಗಳ ಮಾತು ಕೇಳಿದ್ದಾರೆ. ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಾ ಮಾಡುವ ಸಂದರ್ಭ ಹಸಿರು ಸಾಲು ಹಾಕಿಕೊಂಡಿದ್ದರು. ಆದರೆ, ಈಗ ರೈತರ ಭೂಮಿಯನ್ನು ಕೊಡುತ್ತಿದ್ದಾರೆ. ರೈತ ವಿರೋಧಿ ಸರ್ಕಾರಕ್ಕೆ ನಮ್ಮ ಪಕ್ಷ ವಿರೋದಿಸುತ್ತದೆ ಎಂದರು.
ಮುಖ್ಯ ಕಾರ್ಯದರ್ಶಿಗೆ ವೈದ್ಯಕೀಯ ಸಾಮಾಗ್ರಿಗಳ ಖರೀದಿ ವಿಚಾರದ ಬಗ್ಗೆ ಲೆಕ್ಕ ಕೊಡಿ ಎಂದು ಪತ್ರ ಬರೆದಿದ್ದೇನೆ. ಅವರು ಈ ವಿಚಾವಾಗಿ 2-3 ದಿನಗಳಲ್ಲಿ ಲೆಕ್ಕ ನೀಡುವುದಾಗಿ ಭರವಸೆ ನೀಡಿದ್ದಾರೆ. ಅವರು ಲೆಕ್ಕ ನೀಡಿದ ಬಳಿಕ ಪುನಃ ಮಾತನಾಡುತ್ತೇನೆ. ಕೆಂದ್ರ ಹಾಗೂ ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಯಾವ ಅರ್ಥದಲ್ಲಿ ಲೆಕ್ಕ ಕೇಳುವ ಸಮಯ ಇದಲ್ಲ ಎಂದಿದ್ದಾರೆ ಎಂದು ತಿಳಿದಿಲ್ಲ. ಲೆಕ್ಕ ಕೊಡಿ ಎಂದು ಎಲ್ಲರೂ ಕೇಳುತ್ತಿದ್ದಾರೆ. ಈ ವಿಚಾರವಾಗಿ ಡಿ.ಕೆ.ಶಿ ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.